ಮಳೆ-ಬೆಳೆ ಸಮೃದ್ಧಿಗಾಗಿ ಜೋಕುಮಾರನ ಜಾನಪದ ಆಚರಣೆ 
ನ್ಯೂಸ್

ಗಣೇಶ ಹೋದ ಬೆನ್ನಲ್ಲೇ ಜೋಕುಮಾರನ ಎಂಟ್ರಿ: ಉತ್ತರ ಕರ್ನಾಟಕದಲ್ಲಿ ಏಳು ದಿನಗಳ ವಿಶಿಷ್ಟ ಆಚರಣೆ | Jokumara Swamy

ಗಣೇಶ ಚತುರ್ಥಿಯ ಬಳಿಕ ಉತ್ತರ ಕರ್ನಾಟಕದ ಭಾಗದಲ್ಲಿ ಜೋಕುಮಾರ ಸ್ವಾಮಿಯ ಆಚರಣೆ ಆರಂಭವಾಗಿದೆ. ಮನೆ ಮನೆಗೆ ಜೋಕಪ್ಪನನ್ನು ಹೊತ್ತು ತೆರಳುವ ಮಹಿಳೆಯರು ಮಳೆ, ಕೃಷಿ ಹಾಗೂ ರೈತರ ಒಳಿತಿಗಾಗಿ ಜಾನಪದ ಹಾಡುಗಳನ್ನು ಹಾಡುತ್ತಿದ್ದಾರೆ.

ಮಂಜುನಾಥ್ ಹಾಲವರ್ತಿ

ಗಣೇಶ ಹುಟ್ಟಿದ ಐದನೇ ದಿನಕ್ಕೆ ಹುಟ್ಟುವ ಜೋಕುಮಾರ ಸ್ವಾಮಿ

ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮನೆ ಮನೆಗೆ ಬರುವ ಜೋಕಪ್ಪ

ಬಿದಿರು ಬುಟ್ಟಿಯಲ್ಲಿ ಜೋಕುಮಾರನನ್ನು ಹೊತ್ತು ಸಾಗುವ ಮಹಿಳೆಯರು

Jokumara Swamy: ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ಜೋಕುಮಾರ ಸ್ವಾಮಿಯ ಆಚರಣೆ ಶುರುವಾಗಿದೆ. ಪಟ್ಟಣ ಹಾಗೂ ಹಳ್ಳಿಗಳಲ್ಲಿ ಮಹಿಳೆಯರು ಮನೆ ಮನೆಗೆ ಜೋಕುಮಾರನನ್ನು ಹೊತ್ತುಕೊಂಡು ತೆರಳಿ, ಮಳೆ ಹಾಗೂ ರೈತರ ಒಳಿತಿಗಾಗಿ ಹಾಡುಗಳನ್ನು ಹಾಡುತ್ತಿದ್ದಾರೆ. ಈ ಬಾರಿ ಮಳೆಯೂ ಸಾಥ್ ನೀಡಿರುವುದರಿಂದ ಆಚರಣೆಯ ಸಂಭ್ರಮ ಮತ್ತಷ್ಟು ಹೆಚ್ಚಿದೆ.

ಗಣೇಶ ಹುಟ್ಟಿದ ಐದನೇ ದಿನ ಜೋಕುಮಾರ ಹುಟ್ಟುತ್ತಾನೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಅಗಲ ಮುಖ, ದೊಡ್ಡ ಕಣ್ಣು, ಹುರಿ ಮೀಸೆ, ತೆರೆದ ಬಾಯಿ ಹಾಗೂ ಕೈಯಲ್ಲಿ ಸಣ್ಣ ಕತ್ತಿ ಇರುವ ಮಣ್ಣಿನ ಮೂರ್ತಿಯೇ ಜೋಕುಮಾರ ಸ್ವಾಮಿ. ಹಣೆಯ ಮೇಲೆ ವಿಭೂತಿ-ಕುಂಕುಮದ ಪಟ್ಟಿಗಳಿರುವ ಈ ಮೂರ್ತಿಯನ್ನು ಸ್ಥಳೀಯರು ‘ಜೋಕಪ್ಪ’ ಎಂದೂ ಕರೆಯುತ್ತಾರೆ.

ಮಳೆ, ಬೆಳೆ, ರೈತರ ಒಳಿತಿಗಾಗಿ ಜೋಕುಮಾರನ ಆಚರಣೆ

ಉತ್ತಮ ಮಳೆ- ಬೆಳೆಗಾಗಿ ಪ್ರಾರ್ಥನೆ

ಬೇವಿನ ಸೊಪ್ಪಿನ ನಡುವೆ ಜೋಕುಮಾರನ ಮೂರ್ತಿಯನ್ನಿಟ್ಟು ಮಹಿಳೆಯರು ಮನೆ ಮನೆಗೆ ತೆರಳುತ್ತಾರೆ. ‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರಿ ತುಂಬಿ...’ ಎಂದು ಹಾಡುತ್ತಾ ಉತ್ತಮ ಮಳೆ, ರೈತರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಈ ಜಾನಪದ ಹಾಡುಗಳು ಇಂದಿಗೂ ಹೊಸ ತಲೆಮಾರಿನ ಗಮನ ಸೆಳೆಯುತ್ತಿವೆ.

ಗಂಗಾ ಮತಸ್ಥರ ಮನೆಯಲ್ಲಿ ಹುಟ್ಟುವ ಜೋಕಪ್ಪ

ಗಂಗಾ ಮತಸ್ಥರ ಮನೆಯಲ್ಲಿ ಜೋಕುಮಾರ ಹುಟ್ಟುತ್ತಾನೆ ಎಂಬ ಸಂಪ್ರದಾಯವಿದೆ. ಕುಟುಂಬದವರು ಸೇರಿ ಜೋಕಪ್ಪನನ್ನು ಮನೆ ಮನೆಗೆ ಕರೆದೊಯ್ಯುತ್ತಾರೆ. ಈಗ ಆದಾಯ ಕಡಿಮೆಯಾಗಿದ್ದರೂ ಆಚರಣೆಯ ಮೇಲಿನ ಉತ್ಸಾಹ ಕಡಿಮೆಯಾಗಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಈ ಸಂಪ್ರದಾಯ ಕ್ಷೀಣಿಸುತ್ತಿರುವುದು ಸ್ಥಳೀಯರ ಆತಂಕವಾಗಿದೆ.

ಹಿಂದೆ ಜೋಕುಮಾರನನ್ನು ಮನೆ ಮನೆಗೆ ಕರೆದೊಯ್ಯುವವರಿಗೆ ಜೋಳ, ಅಕ್ಕಿ, ಗೋಧಿ, ಒಣ ಮೆಣಸಿನಕಾಯಿ ಸೇರಿದಂತೆ ಧಾನ್ಯಗಳು ಹಾಗೂ ಹಣ ಸಾಕಷ್ಟು ಸಿಗುತ್ತಿತ್ತು. ಆಗ ಜೋಕುಮಾರನ ಬಾಯಿ ತುಂಬ ಬೆಣ್ಣೆ ಇರುತ್ತಿತ್ತು ಎಂದು ಮಹಿಳೆಯರು ನೆನಪಿಸಿಕೊಳ್ಳುತ್ತಾರೆ. ಈಗ ಮಳೆ ಕೊರತೆ, ಕೃಷಿ ಸಂಕಷ್ಟ ಮತ್ತು ದಾನಿಗಳ ಸಂಖ್ಯೆಯೂ ಕಡಿಮೆಯಾಗಿದೆ.

ಏಳು ದಿನಗಳ ಆಚರಣೆ

ಜೋಕಪ್ಪನನ್ನು ಏಳು ದಿನಗಳ ಕಾಲ ಊರಿನ ಮನೆ ಮನೆಗೆ ಕರೆದೊಯ್ಯಲಾಗುತ್ತದೆ. ಏಳನೇ ದಿನ ಹುಣ್ಣಿಮೆಯಂದು ಜೋಕಪ್ಪ ಸಾಯುತ್ತಾನೆ ಎಂಬ ನಂಬಿಕೆಯಿದೆ. ಬಳಿಕ ಮೂರ್ತಿಯನ್ನು ಊರ ಹೊರಗಿನ ಅಗಸರು ಬಟ್ಟೆ ಒಗೆಯುವ ಬಂಡೆಯ ಕೆಳಗೆ ಇಟ್ಟು ಬರುತ್ತಾರೆ. ಹುಣ್ಣಿಮೆಯಂದು ಆಚರಣೆ ಮುಕ್ತಾಯವಾಗುವುದರಿಂದ ಇದನ್ನು ‘ಜೋಕುಮಾರ ಹುಣ್ಣಿಮೆ’ ಎಂದು ಕರೆಯಲಾಗುತ್ತೆ.

ಇದನ್ನೂ ಓದಿ: ಸಿಂಹಿಣಿಯರ ಘರ್ಜನೆ ಅಡಗಿಸಿದ ಹರ್ಮನ್​ ಪಡೆ! ಏಷ್ಯನ್​ ಗೇಮ್ಸ್ ಕ್ರಿಕೆಟ್​ ವಿಭಾಗದಲ್ಲಿ ಭಾರತಕ್ಕೆ ಚಿನ್ನ | Asian Games

ಮಳೆ, ಕೃಷಿ ಮತ್ತು ರೈತರ ಬದುಕಿನ ಜೊತೆ ಬೆಸೆದುಕೊಂಡಿರುವ ಜೋಕುಮಾರ ಆಚರಣೆ ಇಂದಿಗೂ ಕೂಡ್ಲಿಗಿಯಲ್ಲಿ ಜೀವಂತವಾಗಿದೆ. ಕಾಲ ಬದಲಾದರೂ, ಪೂರ್ವಜರಿಂದ ಬಂದ ಈ ಸಂಪ್ರದಾಯವನ್ನು ಸ್ಥಳೀಯರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.