ಕೋಲಾರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ. 
ನ್ಯೂಸ್

20ಕ್ಕೆ ಅರಣ್ಯ ಜಮೀನು ಜಂಟಿ ಸರ್ವೇ!

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ಕುಮಾರ್​ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿಸರ್ವೇಗೆ ಜಿಲ್ಲಾಡಳಿತ ಕೊನೆಗೂ ದಿನಾಂಕ ನಿಗದಿಪಡಿಸಿದೆ. ಆ ಪ್ರಕಾರ ತಾಂತ್ರಿಕ ಅಡ್ಡಿ ಸೇರಿ ವಿವಿಧ ಕಾರಣ ನೀಡಿ ಮುಂದೂಡುತ್ತಲೇ ಬಂದಿದ್ದ ಜಂಟಿ ಸರ್ವೇ ಕಾರ್ಯ ನಾಳೆ (ಡಿ.20) ನಡೆಯಬೇಕಿದ್ದು, ನಡೆಯುವುದೇ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.

ಜಿಲ್ಲೆಯ ಶ್ರೀನಿವಾಸಪುರ ಅರಣ್ಯ ವಲಯದ ಜಿಂಗಾಲಕುಂಟೆ ಅರಣ್ಯ ಪ್ರದೇಶದಲ್ಲಿರಮೇಶ್​ ಕುಮಾರ್​ ಅವರು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿಅರಣ್ಯ ಇಲಾಖೆ ಮತ್ತು ರಮೇಶ್​ಕುಮಾರ್​ ಮಧ್ಯೆ ನಡೆಯುತ್ತಿದ್ದ ಕಾನೂನು ಹೋರಾಟ ತಾರ್ಕಿಕ ಹಂತ ತಲುಪಿದ್ದು, ಅದರಂತೆ ಡಿ.20ರಂದು ಜಂಟಿ ಸರ್ವೇ ನಡೆದರೆ ಭೂಮಿ ಯಾರದೆಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಜಿಂಗಾಲಕುಂಟೆ ಅರಣ್ಯ ಪ್ರದೇಶದಲ್ಲಿ 61.39 ಎಕರೆ ಜಮೀನು ಒತ್ತುವರಿಯಾಗಿರುವುದನ್ನು ಜಂಟಿ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಮಂತ್ರಾಲಯವು ರಾಜ್ಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ಜಿಲ್ಲಾಡಳಿತವು ಜಂಟಿ ಸರ್ವೇ ನಡೆಸಲು ನ.6ನ್ನು ನಿಗದಿಪಡಿಸಿತ್ತು. ಆದರೆ ಡಿಡಿಎಲ್​ಆರ್​ ತಾಂತ್ರಿಕ ಕಾರಣಗಳಿಂದ ಜಂಟಿ ಸರ್ವೇ ಮುಂದೂಡುವುದಾಗಿ ತಿಳಿಸಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲದೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.

ಅರಣ್ಯ ಇಲಾಖೆಯಿಂದ 2022ರ ಆಗಸ್ಟ್​ನಿಂದ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೇತಗಾನಹಳ್ಳಿ ಸಮೀಪದಿಂದ ಅರಣ್ಯ ಜಮೀನು ಒತ್ತುವರಿ ತೆರವು ಕಾರ್ಯಚರಣೆ ಕೈಗೊಳ್ಳಲಾಯಿತು. ಕೇತಗಾನಹಳ್ಳಿಯಿಂದ ಶುರುವಾಗಿ ಒತ್ತುವರಿ ಕಾರ್ಯಚರಣೆ ಜಿಲ್ಲೆಯ ಮುಳಬಾಗಿಲು, ಕೋಲಾರದಲ್ಲೂ ನಡೆಯಿತು. ಇದರಿಂದಾಗಿ ಬಡವರು, ಮಧ್ಯಮ ವರ್ಗದ ರೈತರು ಬೀದಿಪಲಾಗುವಂತಾಯಿತು.

ಈ ಮಧ್ಯೆ ರಮೇಶ್​ ಕುಮಾರ್​ ಸಹ ಒತ್ತುವರಿ ಮಾಡಿಕೊಂಡಿದ್ದಾರೆ, ಆ ಜಮೀನನ್ನು ಯಾಕೆ ಒತ್ತುವರಿ ಮಾಡುತ್ತಿಲ್ಲ?, ಕೂಡಲೇ ರಾಜಕೀಯ ಬಲಾಢ್ಯರ ಒತ್ತುವರಿ ತೆರವು ಮಾಡಿ ಎಲ್ಲರಿಗೂ ಒಂದೇ ನ್ಯಾಯ ದೊರಕಿಸಬೇಕು ಎಂದು ವಿವಿಧ ಸಂ&ಸಂಸ್ಥೆಗಳವರು ಒತ್ತಾಯಿಸಿದ್ದರು. ಜತೆಗೆ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಮಂತ್ರಾಲಯದ ಅಧಿಕಾರಿಗಳು, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಪತ್ರ ರವಾನಿಸಿದ್ದರು. ಹೀಗೆ ದೆಹಲಿಯಿಂದ ಜಿಲ್ಲೆಯ ತನಕ ಪತ್ರವ್ಯವಹಾರವೂ ನಡೆದಿತ್ತು.

* ಕೇಂದ್ರದಿಂದ ತಿಳಿವಳಿಕೆ ಪತ್ರ!

ಜಿಂಗಾಲಕುಂಟೆ ಅರಣ್ಯ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಮೂರು ಬಾರಿ ರಾಜ್ಯ ಸರ್ಕಾರಕ್ಕೆ ತಿಳಿವಳಿಕೆ ಪತ್ರ ಬಂದಿದೆ. ವರದಿ ನೀಡುವಂತೆ ಮೂರನೇ ತಿಳುವಳಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಜಂಟಿ ಸರ್ವೇ ಕಾರ್ಯಕ್ಕೆ ಕ್ರಮವಹಿಸಿದೆ.

* ಮಾಜಿ ಸಚಿವರಿಗೆ ಸೂಚನೆ

ಡಿ.20ರಂದು ನಡೆಯುವ ಜಂಟಿ ಸರ್ವೇ ವೇಳೆ ಹಾಜರಿರುವಂತೆ ರಮೇಶ್​ಕುಮಾರ್​ ಅವರಿಗೆ ಪತ್ರದ ಮೂಲಕತಿಳಿಸಲಾಗಿದೆ. ಇದರೊಂದಿಗೆ ಡಿಸಿಎ್​ ಹಾಗೂ ತಹಸೀಲ್ದಾರ್​ ಅವರು ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಭೂದಾಖಲೆಗಳ ಉಪನಿರ್ದೇಶಕರು ತಿಳಿಸಿದ್ದಾರೆ.

* ಪ್ರಕರಣದ ಹಿನ್ನೆಲೆ

ರಮೇಶ್​ ಕುಮಾರ್​ ಸ್ವಾಧಿನದಲ್ಲಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ವಾಧಿನದಲ್ಲಿರುವ ಜಮೀನನ್ನು ದುರಸ್ತಿ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅರಣ್ಯ ಇಲಾಖಾಧಿಕಾರಿಗಳು ಜಮೀನಿನ ಮಾಲೀಕತ್ವಕ್ಕಾಗಿ ದಾಖಲೆಗಳನ್ನು ಮಂಡಿಸಿದ್ದರು. ಆ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟ್​ ಮೆಟ್ಟಿಲೇರಿತ್ತು. ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್​ ಕೆ.ಆರ್​.ರಮೇಶ್​ಕುಮಾರ್​ ಅವರ ಉಪಸ್ಥಿತಿಯಲ್ಲಿ ಜಂಟಿ ಸರ್ವೇ ನಡೆಸಿ, ಒತ್ತುವರಿ ಆಗಿರುವುದು ಕಂಡು ಬಂದಲ್ಲಿ ತೆರವುಗೊಳಿಸಲು ಕ್ರಮ ಜರುಗಿಸಬೇಕೆಂದು ಸೂಚಿಸಿತ್ತು.

2013ರಿಂದಲೂ ಅಧಿಕಾರಿಗಳು ಯಾವುದೇ ಕ್ರಮವಹಿಸಲು ಮುಂದಾಗಿರಲಿಲ್ಲ. ಈ ನಡುವೆ ಶ್ರೀನಿವಾಸಪುರ ವಲಯದಲ್ಲಿ ರೈತರು ಒತ್ತುವರಿ ಮಾಡಿಕೊಂಡಿದ್ದ ಸಾವಿರಾರು ಎಕರೆ ಜಮೀನನ್ನು ತೆರವುಗೊಳಿಸಿದ್ದಂತಹ ಅರಣ್ಯ ಇಲಾಖೆಯ ಅಧಿಕಾರಿಗಳು, ಬಲಾಢ್ಯರ ಜಮೀನನ್ನು ತೆರವುಗೊಳಿಸುತ್ತಿಲ್ಲ. ಜಿಂಗಾಲಕುಂಟೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾಗುತ್ತಿಲ್ಲವೆಂದು ಕೇಂದ್ರ ಅರಣ್ಯ ಇಲಾಖೆಗೆ ಕೆಲವರು ದೂರು ನೀಡಿದ್ದರು.

ಅದರಂತೆ ಕೇಂದ್ರ ಅರಣ್ಯ ಇಲಾಖೆಯು ಕೂಡಲೇ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ರಾಜ್ಯ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ರಾಜ್ಯಮಟ್ಟದ ಅಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದು ಜಂಟಿ ಸರ್ವೇ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.