ನ್ಯೂಸ್

ಸಚಿವಾಲಯದ ಬಾಕಿ ಕಡತಗಳು ತಿಂಗಳಲ್ಲಿ ವಿಲೇವಾರಿಗೆ ಜಂಟಿ ಸಂಕಲ್ಪ: ಶಾಲಿನಿ ರಜನೀಶ್ ಸಲಹೆ

ಬೆಂಗಳೂರು: ಸಚಿವಾಲಯದಲ್ಲಿ ಬಾಕಿಯಿರುವ ಕಡತಗಳನ್ನು ತಿಂಗಳೊಳಗೆ ವಿಲೇವಾರಿಗೆ ಜಂಟಿ ಸಂಕಲ್ಪ ಮಾಡಿ ಕಾರ್ಯತತ್ಪರರಾಗೋಣ ಎಂದು ಸಚಿವಾಲಯ ನೌಕರರ ಸಂಘದ ನಿಯೋಗಕ್ಕೆ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಲಹೆ ನೀಡಿದರು.

ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಸಂಘದ ಅಧ್ಯಕ್ಷ ರಮೇಶ್ ಸಂಗಾ ಮತ್ತು ಪದಾಧಿಕಾರಿಗಳ ನಿಯೋಗ ಗುರುವಾರ ಭೇಟಿಯಾಗಿ ಪುಷ್ಪಗುಚ್ಛ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಅಹವಾಲು ಮಂಡಿಸಿತು.

ಅಭಿನಂದನೆ ಸ್ವೀಕರಿಸಿ, ಅಹವಾಲು ಆಲಿಸಿದ ಶಾಲಿನಿ ರಜನೀಶ್ ಮಾತನಾಡಿ ನಾವು-ನೀವು ಒಟ್ಟಾಗಿ ಸರ್ಕಾರದ ಕೆಲಸಗಳನ್ನು ದಕ್ಷತೆ, ಅಚ್ಚುಕಟ್ಟಾಗಿ ಮಾಡೋಣ. ಜನರಿಗೆ ಸಕಾಲಕ್ಕೆ ಸ್ಪಂದಿಸೋಣ ಎಂದು ಹೇಳಿದರು.

ಸಚಿವಾಲಯದ ಕೆಲಸ, ಕಾರ್ಯಗಳು ಶೈಲಿ ಕೂಡ ಬದಲಾವಣೆಗೆ ಒಳಪಡಬೇಕು. ಕಾಲೋಚಿತ (ಅಪ್ಡೇಟ್) ಆಗಬೇಕು. ಈ ನಿಟ್ಟಿನಲ್ಲಿ ಸಚಿವಾಲಯದ ಹೊಸ ಸಿಬ್ಬಂದಿಗೆ ಸೂಕ್ತ ತರಬೇತಿ ಅಗತ್ಯವಿದೆ. ಸಂಘವೇ ತರಬೇತಿಗೆ ಬೇಕಾದ ಕೈಪಿಡಿ ತಯಾರಿಸಿ ಕೊಟ್ಟರೆ ಒಟ್ಟಿಗೆ ಕುಳಿತು ಚರ್ಚಿಸಿ ಅಂತಿಮಗೊಳಿಸಲು ಅನುಕೂಲವಾಗುತ್ತದೆ ಎಂದರು.

ಸಚಿವಾಲಯಕ್ಕೆ ಹೊಸದಾಗಿ ನೇಮಕವಾದ ಸಿಬ್ಬಂದಿಗೆ ಸೇರ್ಪಡೆ ತರಬೇತಿ (ಇಂಡಕ್ಷನ್ ಟ್ರೈನಿಂಗ್) ಬಹುತೇಕ ಕಡಿಮೆಯಾಗಿದೆ. ಸಚಿವ ಸಂಪುಟ ಸಭೆಯ ಟಿಪ್ಪಣಿ ಸೇರಿ ಪ್ರತಿಯೊಂದು ಕೆಲಸದ ಬಗ್ಗೆ ತರಬೇತಿ ನೀಡಿದರೆ, ಜವಾಬ್ದಾರಿ ಚೊಕ್ಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಶಾಲಿನಿ ರಜನೀಶ್ ಕಿವಿಮಾತು ಹೇಳಿದರು.

ತುರ್ತು ಕ್ರಮದ ಭರವಸೆ

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಜಂಟಿ ಸಮಾಲೋಚನಾ (ಜೆಸಿಎಂ) ಸಮಿತಿ ಸಭೆಯಲ್ಲಿ ಚರ್ಚಿಸಿದ ಪ್ರಕಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಆರೋಗ್ಯ ಸಂಜೀವಿನಿ ಯೋಜನೆ ಜಾರಿ, ಸರ್ಕಾರಿ ವಸತಿ ಗೃಹಗಳ ನಿರ್ಮಾಣ, ಇಲಾಖೆಗಳ ವೃಂದ ಮತ್ತು ನೇಮಕ ನಿಯಮಗಳ ತಿದ್ದುಪಡಿ, ಖಾಲಿ ಹುದ್ದೆಗಳ ಭರ್ತಿ, ಮುಂಬಡ್ತಿ ಮುಂತಾದ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಲು ಕ್ರಮವಹಿಸುವ ಭರವಸೆ ನೀಡಿದ ಶಾಲಿನಿ ರಜನೀಶ್, ಸಚಿವಾಲಯ ನೌಕರರ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.