ಶಿವಮೊಗ್ಗ: ಯುವಜನತೆ ದೇಹ-ಮನಸ್ಸಿಗೆ ಉತ್ತಮವಾದ ಅಭ್ಯಾಸಗಳು ಮತ್ತು ಆಹಾರ ಕ್ರಮ ಅನುಸರಿಸಿ ಆರೋಗ್ಯ ಕಾಪಾಡಿಕೊಕೊಳ್ಳಬೇಕು. ವ್ಯಸನ ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ವಾಜಪೇಯಿ ಲೇಔಟ್‌ನ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಶಿವಮೊಗ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮದ್ಯ ಮತ್ತು ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದಲ್ಲಿ ಬೇಡದ ವಸ್ತುಗಳ ಬಗ್ಗೆಯೇ ಮನಸ್ಸು ಸೆಳೆಯುತ್ತದೆ. ಯುವಜನತೆ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇದರಿಂದ ಆರೋಗ್ಯದ ಮೇಲಾಗುವ, ಕುಟುಂಬ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು. ಮಾದಕ ವ್ಯಸನದಿಂದ ಯುವಜನತೆ ಸೇರಿ ಈ ವ್ಯಸನಕ್ಕೆ ಒಳಗಾದವರ ಆರೋಗ್ಯ ಹಾಳಾಗುತ್ತಿದೆ. ಸಾಮಾಜಿಕ, ಕೌಟುಂಬಿಕ ಆರೋಗ್ಯ ಕೆಡುತ್ತದೆ. ಆದ್ದರಿಂದ ಮುಖ್ಯವಾಗಿ ಯುವಜನತೆ ಸರಿ ತಪ್ಪುಗಳ ಬಗ್ಗೆ ಆಲೋಚಿಸಬೇಕು. ಯಾವುದು ಹಾನಿಕಾರವೋ ಅದನ್ನು ಉಪಯೋಗಿಸಬಾರದೆಂಬ ದೃಢ ಸಂಕಲ್ಪ ಮಾಡಬೇಕು ಎಂದರು.
ಉಪನ್ಯಾಸ ನೀಡಿದ ಮನೋವೈದ್ಯ ಡಾ. ಎಚ್.ಎಲ್.ಪ್ರಮೋದ್, ಕುತೂಹಲ, ಒತ್ತಡ, ಶೋಕಿ ಹೀಗೆ ಇತರೆ ಕಾರಣದಿಂದ ಮಾದಕ ವಸ್ತುಗಳ ಉಪಯೋಗ ಆರಂಭವಾಗಿ, ಬರ ಬರುತ್ತಾ ಚಟವಾಗಿ ಹೋಗುತ್ತದೆ. ಸಾಮಾಜಿಕ ಜಾಲತಾಣ, ಗೇಮ್ಸ್, ಜೂಜು ಇವೆಲ್ಲ ಚಟವಾಗಿ ಹೇಗೆ ಪರಿವರ್ತನೆ ಆಗುತ್ತದೆ. ಅದರಿಂದ ದೂರ ಇರುವುದು ಹೇಗೆ ?, ವ್ಯಸನಕ್ಕೆ ಒಳಗಾದರೆ ಅದನ್ನು ಪತ್ತೆ ಹಚ್ಚುವುದು, ಅದರಿಂದ ಹೊರಬರುವ ಬಗೆ, ಮಾದಕ ವಸ್ತು ವ್ಯಸನಕ್ಕೆ ಲಭ್ಯವಿರುವ ಚಿಕಿತ್ಸೆ ಕುರಿತು ವಿವರವಾಗಿ ತಿಳಿಸಿಕೊಟ್ಟರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶೋಭಾ ಉಪಸ್ಥಿತರಿದ್ದರು.