ಪಿರಿಯಾಪಟ್ಟಣ: ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೈ ಜೋಡಿಸಬೇಕಾದ ಅಗತ್ಯವಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ತಿಮಕಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪಿರಿಯಾಪಟ್ಟಣ ಮತ್ತು ಅರಕಲಗೂಡು ತಾಲೂಕು ಕುಂಚಿಟಿಗರ ಸಂಘಗಳ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಂಚಿಟಿಗ ಸಂಘಟನೆಯ ಪದಾಧಿಕಾರಿಗಳು ಪಕ್ಷ ಭೇದ ಮರೆತು ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಎಂದು ಸಲಹೆ ನೀಡಿದರು.
ನನ್ನ ಅಧಿಕಾರವಧಿಯಲ್ಲಿ ತಿಮಕಾಪುರ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಗ್ರಾಮಕ್ಕೆ ಅಗತ್ಯವಿರುವ ರಸ್ತೆ, ಚರಂಡಿ, ಶಾಲೆ, ಸಮುದಾಯ ಭವನ ಮತ್ತು ದೇವಾಲಯ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯಗಳಿಗೆ ಅನುದಾನ ಒದಗಿಸಿರುವುದಾಗಿ ತಿಳಿಸಿದರು. ಈ ಹಿಂದೆ ಅಧಿಕಾರದಲ್ಲಿದ್ದ ಶಾಸಕರು ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಅನುದಾನವನ್ನೇ ತಮ್ಮ ಅನುದಾನವೆಂಬಂತೆ ಬಿಂಬಿಸುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವುದರ ಜತೆಗೆ ನನ್ನನ್ನು ದೂರಿಕೊಂಡು ಆಡಳಿತ ನಡೆಸಿದ್ದಾರೆ ಎಂದು ಟೀಕಿಸಿದರು.
ತಾಲೂಕಿನ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬೇರೆ ಕಡೆ ಹೋಗುವುದನ್ನು ತಪ್ಪಿಸಲು ನನ್ನ ಅವಧಿಯಲ್ಲಿ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗಾಗಿ ಎರಡು ಪದವಿ ಕಾಲೇಜುಗಳು, ಎರಡು ಐಟಿಐ ಕಾಲೇಜುಗಳು ಮತ್ತು ಒಂದು ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಿದ್ದೇನೆ ಎಂದರು.
ತಾಲೂಕಿನ ಕುಂಚಿಟಿಗ ಸಮಾಜದ ಬೇಡಿಕೆಯಂತೆ ಕುಂಚಟಿಗ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ 25 ಲಕ್ಷ ರೂ.ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೈತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ಸೇರಿದಂತೆ ಬಡವರ ಪರವಾದ ಸರ್ಕಾರವಾಗಿದೆ ಎಂದರು.
ಕುಂಚಿಟಿಗ ಸಮಾಜದ ಶ್ರೀಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಸಮಾಜದಲ್ಲಿರುವ ವಿಭಿನ್ನ ಮನಸ್ಥಿತಿಗಳನ್ನು ಒಗ್ಗೂಡಿಸಿಕೊಂಡು ಹೋದಾಗ ಮಾತ್ರ ಕುಂಚಿಟಿಗ ಸಮಾಜ ಅಭಿವೃದ್ಧಿಯಾಗಲು ಸಾಧ್ಯ ಎಂದರು. ಸಂಘರ್ಷದಿಂದ ಏನೂ ಸಾಧಿಸಲಾರೆವು. ಸೌಹಾರ್ದತೆಯಿಂದ ಮಾತ್ರ ನಮ್ಮ ಸಂಘಟನೆಯನ್ನು ಭದ್ರ ಪಡಿಸಿಕೊಳ್ಳಲು ಸಾಧ್ಯ, ಇದಕ್ಕೆ ನಿಮ್ಮೆಲ್ಲರ ಒಗ್ಗಟ್ಟು ಸಹಕಾರ ಅಗತ್ಯವಾಗಿ ದೊರೆತಲ್ಲಿ ಕುಂಚಿಟಿಗ ಸಮಾಜ ಬೆಳವಣಿಗೆಯತ್ತ ಸಾಗುತ್ತದೆ ಎಂದರು.
ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಕುಂಚಿಟಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖಂಡರಾದ ಜಿ.ದಾಸಪ್ಪ, ಚಿಕ್ಕೇಗೌಡ, ತಿಮ್ಮೇಗೌಡ, ಗೋವಿಂದೇಗೌಡ, ಟಿ.ಪಿ.ಕುಮಾರ್, ಚಂದ್ರಕಲಾ, ಟಿ.ಸ್ವಾಮಿ, ಲತಾ, ರಂಗಸ್ವಾಮಿ ಇತರರು ಹಾಜರಿದ್ದರು.