ಜೋಗದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದರು. ಗೋಪಾಲಕೃಷ್ಣ ಬೇಳೂರು, ಗುರುದತ್ತ ಹೆಗಡೆ, ಧರ್ಮಪ್ಪ, ಉಮಾಪತಿ ಇತರರಿದ್ದರು.  
ನ್ಯೂಸ್

ಜೋಗ ಸರ್ವಋತು ಪ್ರವಾಸಿ ತಾಣ

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ಸರ್ವ ಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಹೆಜ್ಜೆ ಇರಿಸಲಾಗಿದೆ. ಈ ಕಾರ್ಯ ಪೂರ್ಣಗೊಳಿಸಲು ಸರ್ಕಾರ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಜೋಗ ಜಲಪಾತ ಪ್ರದೇಶದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಅಧಿಕಾರಿಗಳೊಂದಿಗೆ ಸೋಮವಾರ ಪರಿಶೀಲನೆ ನಡೆಸಿ, ನಂತರ ನಡೆದ ಸಭೆಯಲ್ಲಿ ಮಾತನಾಡಿದರು.

ಜಲಪಾತ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವೀಕ್ಷಣಾ ಗೋಪುರ ಮತ್ತು ಪ್ರವೇಶ ದ್ವಾರಗಳ ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಈ ಹಿಂದಿನ ಸರ್ಕಾರ ಯೋಜನೆ ರೂಪಿಸಿದ್ದರೂ ಹಾಲಿ ಶಾಸಕರು ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ, ಕೆಲಸಗಳು ವೇಗವಾಗಿ ನಡೆಯಲು ಕಾರಣಕರ್ತರಾಗಿದ್ದಾರೆ ಎಂದರು.

ಜೋಗದಲ್ಲಿ ನೂತನವಾಗಿ ನಿರ್ಮಾಣವಾಗುವ ಪಂಚತಾರಾ ಹೋಟೆಲ್ ಬಳಿ ಭಾರಿ ಗಾತ್ರದ ಜಾಯಿಂಟ್ ವ್ಹೀಲ್, ಕೇಬಲ್ ಕಾರ್ ಅಳವಡಿಕೆ, ಗ್ಲಾಸ್ ಹೌಸ್ ಕೆಲಸಗಳಿಗೆ ಶೀಘ್ರ ಚಾಲನೆ ನೀಡಲಾಗುವುದು. ಮುಂದಿನ 3 ತಿಂಗಳ ಒಳಗಾಗಿ ಜೋಗದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಲಿಂಗನಮಕ್ಕಿ ಅಣೆಕಟ್ಟೆಯ ಕೆಳಭಾಗದಲ್ಲಿ 60 ಎಕರೆ ಜಮೀನು ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಮಂಜೂರಾಗಿದೆ. ಹಸ್ತಾಂತರ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಪೂರ್ಣಗೊಳಿಸುವರು. ಕೆಆರ್‌ಎಸ್ ಮಾದರಿಯ ಉದ್ಯಾನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಸುಮಾರು 90 ಕೋಟಿ ರೂ. ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಜೋಗದಲ್ಲಿ ರಾತ್ರಿ 10 ಗಂಟೆವರೆಗೆ ಪ್ರವಾಸಿಗರಿಗೆ ಮನರಂಜನೆ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಮಕ್ಕಳು, ಯುವಜನತೆ ಮತ್ತು ವೃದ್ಧರು ಜೋಗದ ಸೊಬಗನ್ನು ಕಣ್ತುಂಬಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗುವುದು. ಶೀಘ್ರವೇ ಅಧಿಕಾರಿಗಳ ತಂಡದೊಂದಿಗೆ ಸಿಂಗಾಪುರ ಪ್ರವಾಸ ಕೈಗೊಂಡು, ಹಲವು ಮಾದರಿಯ ಅಂತಾರಾಷ್ಟ್ರೀಯ ಶೈಲಿಯ ಪ್ರವಾಸೋದ್ಯಮವನ್ನು ಜೋಗದಲ್ಲಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ, ಕೆಪಿಸಿ ಇಲಾಖೆಯ ಉಮಾಪತಿ, ಚಂದ್ರು, ಪಪಂ ಅಧ್ಯಕ್ಷ ಎಂ.ರಾಜು, ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕೆಪಿಸಿ ಮುಖ್ಯ ಅಭಿಯಂತರು ಇದ್ದರು.