ಅಮೆರಿಕದ 46ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಜೋ ಬೈಡೆನ್ ದ್ವೇಷ ರಾಜಕೀಯ ಮಾಡುವುದಿಲ್ಲವೆಂದು ಸೂಚ್ಯವಾಗಿ ತಿಳಿಸಿದ್ದಾರೆ. ದೇಶದ ಏಕತೆಗೆ ಒತ್ತು ನೀಡುವುದರ ಜತೆಗೆ, ಪ್ರತಿಪಕ್ಷದ ಜತೆ ಸಹಕಾರದಿಂದ ಇರುವುದಾಗಿ ತಿಳಿಸಿದ್ದಾರೆ. ಆದರೆ ಸೋಲನ್ನು ಒಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್, ಕಾನೂನು ಹೋರಾಟದ ಮಾತನ್ನಾಡಿದ್ದಾರೆ. ಈ ಕುರಿತ ಕ್ಯಾಂಪೇನನ್ನು ಸೋಮವಾರ ಆರಂಭಿಸುವುದಾಗಿಯೂ ತಿಳಿಸಿದ್ದಾರೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆಯು ‘ಮಳೆ ನಿಂತರು ಮರದ ಹನಿ ನಿಲ್ಲದು’ ಎಂಬಂತಾಗಿದೆ.
ವಾಷಿಂಗ್ಟನ್: ‘ದೇಶವಾಸಿಗಳು ಗಟ್ಟಿದನಿಯಲ್ಲಿ ಬೆಂಬಲ ನೀಡಿದ್ದಾರೆ. ಸ್ಪಷ್ಟ ಜಯವನ್ನು ಪ್ರಕಟಿಸಿದ್ದಾರೆ. ಈ ವಿಶ್ವಾಸ ನನ್ನನ್ನು ವಿನೀತನನ್ನಾಗಿ ಮಾಡಿದೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಿದೆ. ದೇಶವನ್ನು ಒಗ್ಗೂಡಿಸುವ ಅಧ್ಯಕ್ಷನಾಗಿರುವೆ’ ಎಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾದ ಡೆಮಾಕ್ರಟಿಕ್ ಪಕ್ಷದ ಮುಖಂಡ ಜೋ ಬೈಡೆನ್ ಹೇಳಿದರು. ಚುನಾವಣಾ ಫಲಿತಾಂಶದ ನಂತರ ತಮ್ಮ ತವರು ರಾಜ್ಯ ಡೆಲವೇರ್ನ ವಿಲ್ಮಿಂಗ್ಟನ್ನಲ್ಲಿ ಮೊದಲ ಬಾರಿಗೆ ಶನಿವಾರ ಮಾತನಾಡಿದರು. ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಉಪಸ್ಥಿತರಿದ್ದರು.
‘ಕಳೆದ ನಾಲ್ಕು ವರ್ಷಗಳಿಂದ ಜನರಲ್ಲಿ ಇರುವ ಅಸಮಾಧಾನವನ್ನು ನಾನು ಬಲ್ಲೆ. ಆದರೀಗ ಇಂಥದನ್ನು ಹೋಗಲಾಡಿಸುವ ಸಮಯ ಮತ್ತು ಸುಧಾರಣೆ ಪರ್ವ ಬಂದಿದೆ. ಜತೆಗೆ ಕಠಿಣ ಮಾತುಗಳನ್ನು ಸೌಮ್ಯಗೊಳಿಸಬೇಕಿದೆ. ದೇಶದ ಅಭ್ಯುದಯಕ್ಕಾಗಿ ಹಗೆತನವನ್ನು ಬಿಡಬೇಕಿದೆ. ನಾವು ಶತ್ರುಗಳಲ್ಲ, ಅಮೆರಿಕನ್ನರು ಎಂಬುದನ್ನು ನೆನಪಿಡಬೇಕು’ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದ್ವೇಷ ಸಾಧಿಸುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದರು ಮತ್ತು ಬೆಂಬಲಿಗರು ಕೂಡ ರಿಪಬ್ಲಿಕನ್ ಗೆಳೆಯರೊಂದಿಗೆ ಸಹಕಾರದಿಂದ ಇರಲು ಮನವಿ ಮಾಡಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ವೇದಿಕೆಗೆ ಬರುತ್ತಿದ್ದಂತೆ ಬೆಂಬಲಿಗರು ‘ನಾವು ನಿಮ್ಮನ್ನು ಪ್ರೀತಿಸುತ್ತೇವೆ ಜೋ’ ಎಂದು ಜೋರುದನಿಯಲ್ಲಿ ಘೋಷಿಸಿದರು.
ತಾಯಿಯನ್ನು ಸ್ಮರಿಸಿದ ಕಮಲಾ
ನೂತನ ಉಪಾಧ್ಯಕ್ಷೆಯಾಗಿ ಚುನಾಯಿತೆಯಾಗಿರುವ ಕಮಲಾ ಹ್ಯಾರಿಸ್, ತಮ್ಮ ತಾಯಿ ಶ್ಯಾಮಲಾ ಗೋಪಾಲನ್ರನ್ನು ನೆನಪಿಸಿಕೊಂಡರು. ‘ನಾನು ಇಂದು ಇಲ್ಲಿ ಇರುವುದಕ್ಕೆ ಕಾರಣ ನನ್ನ ತಾಯಿ. 19ನೇ ವರ್ಷದಲ್ಲಿ ಭಾರತದಿಂದ ಅಮೆರಿಕಕ್ಕೆ ಬಂದು ವಿದ್ಯಾರ್ಜನೆ ಮಾಡಿ, ಬದುಕನ್ನು ಕಟ್ಟಿಕೊಂಡ ಅಮ್ಮ, ಬಹುಶಃ ನಾನು ಈ ಮಟ್ಟಕ್ಕೆ ಬೆಳೆಯುವೆ ಎಂದು ಎಣಿಸಿರಲಿಲ್ಲ. ಆದರೆ, ಅಮೆರಿಕದಲ್ಲಿ ಇಂಥ ಸಾಧನೆ ಸಾಧ್ಯವಿದೆ ಎಂಬ ಅರಿವು ಆಕೆಗೆ ಇತ್ತು’ ಎಂದು ರ್ಯಾಲಿಯಲ್ಲಿ ಭಾವುಕರಾಗಿ ನುಡಿದರು. ‘ನನ್ನ ಅಮ್ಮನ ತಲೆಮಾರಿನ ಕಪು್ಪವರ್ಣೀಯರು, ಏಷ್ಯಾದವರು, ಶ್ವೇತವರ್ಣೀಯರು, ಲ್ಯಾಟಿನ್ಗಳು, ಅಮೆರಿಕದ ಮೂಲನಿವಾಸಿ ಮಹಿಳೆಯರು ಈ ಕ್ಷಣವನ್ನು ಎಷ್ಟು ಸಂಭ್ರಮಿಸಿರಬಹುದು ಎಂಬುದನ್ನು ಕಲ್ಪಿಸಿಕೊಂಡೇ ಚಕಿತಳಾಗಿರುವೆ’ ಎಂದರು.
ಪೂರ್ವಜರ ಊರಲ್ಲಿ ಸಂಭ್ರಮ
ಕಮಲಾ ಹ್ಯಾರಿಸ್ ಅವರ ತಾಯಿಯ ಊರಾದ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂನ ಜನರು ಕಮಲಾ ಗೆಲುವನ್ನು ಹಬ್ಬದಂತೆ ಆಚರಿಸಿದ್ದಾರೆ. ಶುಭ ಕೋರುವ ರಂಗೋಲಿ, ಶುಭಾಶಯದ ಫ್ಲೆಕ್ಸ್ಗಳು ಗ್ರಾಮದಲ್ಲಿ ರಾರಾಜಿಸಿವೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಜನರು ಸಂಭ್ರಮಾಚರಣೆ ನಡೆಸಿದರು. ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯನ್ನೂ ನಡೆಸಲಾಯಿತು.
‘ಸೆಕೆಂಡ್ ಜಂಟಲ್ವ್ಯಾನ್’
ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿರುವ ಹಿನ್ನೆಲೆಯಲ್ಲಿ ಅವರ ಪತಿ ಡೌಗ್ಲಾಸ್ ಎಮಾಫ್ ‘ಸೆಕೆಂಡ್ ಜಂಟಲ್ವ್ಯಾನ್’ ಗೌರವ ಪಡೆದ ಮೊದಲ ವ್ಯಕ್ತಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷರ ಪತ್ನಿಯನ್ನು ‘ಫಸ್ಟ್ ಲೇಡಿ’ ಮತ್ತು ಉಪಾಧ್ಯಕ್ಷರ ಪತ್ನಿಯನ್ನು ‘ಸೆಕೆಂಡ್ ಲೇಡಿ’ ಎಂದು ಸಂಬೋಧಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳೆ ಆಯ್ಕೆ ಆಗಿರುವುದರಿಂದ ಅವರ ಪತಿ ‘ಸೆಕೆಂಡ್ ಜಂಟಲ್ವ್ಯಾನ್’ ಎಂಬ ವಿಶೇಷಣ ಪಡೆಯುತ್ತಾರೆ.
ಕಾನೂನು ಹೋರಾಟವೆಂದ ಟ್ರಂಪ್
ಸೋಲನ್ನು ಒಪ್ಪಿಕೊಳ್ಳದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫಲಿತಾಂಶವನ್ನು ನಿರಾಕರಿಸಿದ್ದಾರೆ. ಚುನಾವಣೆಯಲ್ಲಿ ವ್ಯಾಪಕ ವಂಚನೆ ನಡೆದಿದೆ. ಇದನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಮತ್ತೆ ಗುಟುರು ಹಾಕಿದ್ದಾರೆ. ಆದರೆ
ಟ್ರಂಪ್ ನೀತಿ ರದ್ದತಿಗೆ ಬೈಡೆನ್ ಸಿದ್ಧತೆ
ಟ್ರಂಪ್ ಆಡಳಿತದ ಅನೇಕ ನೀತಿಗಳನ್ನು ನೂತನ ಅಧ್ಯಕ್ಷ ಜೋ ಬೈಡೆನ್ ಜನವರಿ 20ರ ನಂತರ ಎಕ್ಸಿಕ್ಯೂಟಿವ್ ಆದೇಶದ ಮೂಲಕ ರದ್ದುಗೊಳಿಸುವ ಸಾಧ್ಯತೆ ಇದೆ. ಆದರೆ, ಸಂಸತ್ನ ಮೇಲ್ಮನೆ (ಸೆನೆಟ್)ಯಲ್ಲಿ ರಿಪಬ್ಲಿಕನ್ ಬಲ ಹೆಚ್ಚಿರುವುದರಿಂದ ಎಕ್ಸಿಕ್ಯೂಟಿವ್ ಆದೇಶಕ್ಕೆ ಒಪ್ಪಿಗೆ ಪಡೆಯುವುದು ಕಠಿಣ ಸವಾಲಾಗಬಹುದು. ಟ್ರಂಪ್ ಆಡಳಿತದಲ್ಲಿ ಜಾರಿಯಾದ ಕಠಿಣ ವಲಸೆ ನೀತಿ, ಚೀನಾ ಜತೆಗಿನ ವಾಣಿಜ್ಯ ಸಮರ, ಕಾರ್ಪೆರೇಟ್ ತೆರಿಗೆ ಮತ್ತು ಸಿರಿವಂತಿಕೆಯ ತೆರಿಗೆ ಇಳಿಕೆ, 2010ರ ಒಬಾಮಾ ಹೆಲ್ತ್ಕೇರ್ ಯೋಜನೆ ಸ್ಥಗಿತ, ಇರಾನ್ ಅಣ್ವಸ್ತ್ರ ಒಪ್ಪಂದ ರದ್ದು ಮುಂತಾದವು ಬೈಡೆನ್ ಆಡಳಿತದಲ್ಲಿ ಪರಿಷ್ಕೃತವಾಗುವ ಸಾಧ್ಯತೆ ಇದೆ. ಪ್ಯಾರಿಸ್ ಒಪ್ಪಂದಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಮರುಸೇರ್ಪಡೆಯಾಗುವ ಸಂಭವ ಇದೆ. ಮುಸ್ಲಿಂ ದೇಶಗಳಿಂದ ವಲಸೆ ನಿರ್ಬಂಧ ಆದೇಶ ತೆರವುಗೊಳ್ಳಬಹುದು.
ಡಿ. 14ಕ್ಕೆ ಎಲೆಕ್ಟೋರಲ್ಗಳಿಂದ ಮತದಾನ
ಜನರಿಂದ ಆಯ್ಕೆಯಾದ ಎಲೆಕ್ಟೋರಲ್ಗಳು ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಮತ ನೀಡುವ ಪಕ್ರಿಯೆ ಡಿ. 14ಕ್ಕೆ (ಡಿಸೆಂಬರ್ನ ಎರಡನೇ ಬುಧವಾರದ ನಂತರ ಬರುವ ಸೋಮವಾರ) ನಡೆಯುತ್ತದೆ. ಈ ಎಲೆಕ್ಟೋರಲ್ಗಳು ವಾಗ್ದಾನದಂತೆ ತಮ್ಮ ಅಭ್ಯರ್ಥಿಗೆ ಮತ ನೀಡುವುದು ಸರ್ವೆಸಾಮಾನ್ಯ. ಆದರೆ, ಕೆಲವೊಮ್ಮೆ ಇದನ್ನು ಮೀರಿ ಅಡ್ಡಮತದಾನ ನಡೆಯುತ್ತದೆ. ಇದರ ಜತೆಗೆ ಅಭ್ಯರ್ಥಿಗಳು ಎಲೆಕ್ಟೋರಲ್ ಕಾಲೇಜು ಮೂಲಕ ಪಡೆದ ಮತಗಳನ್ನು ರಾಜ್ಯಗಳ ಗವರ್ನರ್ ದೃಢೀಕರಿಸುತ್ತಾರೆ. ಎಲೆಕ್ಟೋರಲ್ಗಳಿಂದ ಚಲಾವಣೆಯಾದ ಮತಗಳ ಎಣಿಕೆ ಜನವರಿ 6ರಂದು ನಡೆಯುತ್ತದೆ. ನಂತರ ಕಾಂಗ್ರೆಸ್ (ಸದಸ್ಯರು) ಸಭೆ ಸೇರಿ ಗವರ್ನರ್ ದೃಢೀಕರಿಸಿದ ಮತಗಳು ಮತ್ತು ಎಲೆಕ್ಟೋರಲ್ಗಳು ಚಲಾಯಿಸಿದ ಮತಗಳನ್ನು ಪರಿಶೀಲಿಸಿ ಹೊಸ ಅಧ್ಯಕ್ಷರ ಆಯ್ಕೆಯನ್ನು ಅನುಮೋದಿಸುತ್ತದೆ. ಈ ಪ್ರಕ್ರಿಯೆಯೇ ಅಮೆರಿಕ ಅಧ್ಯಕ್ಷರ ಅಧಿಕೃತ ಆಯ್ಕೆ ಆಗಿದೆ.
ಗಾಲ್ಪ್ ಆಡುತ್ತಿದ್ದ ಟ್ರಂಪ್!
ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಹೊರಬೀಳುವ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಲ್ಪ್ ಆಟದಲ್ಲಿ ತಲ್ಲೀನರಾಗಿದ್ದರು ಎಂದು ತಿಳಿದುಬಂದಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ ಅಧ್ಯಕ್ಷೀಯ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರಬಿದ್ದಿತ್ತು. ಈ ವೇಳೆ ಟ್ರಂಪ್ ವರ್ಜೀನಿಯಾದಲ್ಲಿರುವ ತಮ್ಮ ಟ್ರಂಪ್ ನ್ಯಾಷನಲ್ ಗಾಲ್ಪ್ ಕ್ಲಬ್ನಲ್ಲಿ ಆಟವಾಡುತ್ತಿದ್ದರು.
ಎಲೆಕ್ಷನ್ ಸ್ವಾರಸ್ಯ