ವಾಷಿಂಗ್ಟನ್: ಜಾಗತಿಕವಾಗಿ ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರಬಿದ್ದಿದ್ದು, ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಅವರು ಭರ್ಜರಿ ಜಯ ದಾಖಲಿಸುವ ಮೂಲಕ ಮುಂದಿನ ಯುಎಸ್ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
‘ಸ್ವಿಂಗ್ ರಾಜ್ಯ’ದಲ್ಲಿ ಪ್ರಮುಖವಾದ ಪೆನ್ಸಿಲ್ವೇನಿಯಾದಲ್ಲಿ ಬಿಡೆನ್ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಅಮೆರಿಕ ಮಾಧ್ಯಮಗಳಲ್ಲಿ ಮುಂದಿನ ಅಧ್ಯಕ್ಷ ಬೈಡೆನ್ ಎಂದು ಪ್ರದರ್ಶಿಸಲಾಯಿತು.
ಒಟ್ಟು 538 ಮತಗಳ ಪೈಕಿ ಅಧ್ಯಕ್ಷ ಗಾದಿಗೇರಲು ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯವಿದ್ದು, ಜೋ ಬೈಡೆನ್ 290 ಮತಗಳ ಮುನ್ನಡೆಯೊಂದಿಗೆ ಭರ್ಜರಿ ಜಯ ಸಾಧಿಸಿದ್ದಾರೆ. ಹಾಲಿ ಅಧ್ಯಕ್ಷ ಟ್ರಂಪ್ 214 ಮತಗಳನ್ನು ಹಿನ್ನಡೆಯೊಂದಿಗೆ ಹೀನಾಯ ಸೋಲನ್ನು ಅನುಭವಿಸಿದ್ದಾರೆ.
77 ವರ್ಷದ ಬಿಡೆನ್ ಶ್ವೇತಭವನಕ್ಕೆ ಆಯ್ಕೆಯಾದ ಅತ್ಯಂತ ಹಿರಿಯ ಅಭ್ಯರ್ಥಿ ಎಂಬ ಹೆಸರಿಗೆ ಭಾಜನರಾಗಿದ್ದಾರೆ. ಟ್ರಂಪ್ಗೆ 74 ವರ್ಷ ವಯಸ್ಸು. ಚುನಾವಣೆಯಲ್ಲಿ ಸೋಲಿನ ಸುಳಿವು ಸಿಕ್ಕ ಬೆನ್ನಲ್ಲೇ ಹತಾಶೆಗೊಂಡಿದ್ದ ಟ್ರಂಪ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದಾರೆ.
ಸ್ವಿಂಗ್ ನೀಡಿದ 3 ರಾಜ್ಯ
ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುವ ಮುನ್ನ ವಿಸ್ಕಾನ್ಸಿನ್, ಅರಿಜೋನಾ ಮತ್ತು ಮಿಚಿಗನ್ ರಾಜ್ಯಗಳು ಜೋ ಬೈಡೆನ್ಗೆ ‘ಸ್ವಿಂಗ್’ ನೀಡಿದ ರಾಜ್ಯಗಳಾಗಿವೆ. ಕ್ರಮವಾಗಿ ಈ ರಾಜ್ಯಗಳ 10, 11, 16 ಎಲೆಕ್ಟೋರಲ್ ಕಾಲೇಜುಗಳ ಬೆಂಬಲವನ್ನು ಅವರು ಪಡೆದಿದ್ದಾರೆ. 2016ರಲ್ಲಿ ಈ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದರು. 2016ರಲ್ಲಿ ಪೆನ್ಸಿಲ್ವೇನಿಯಾದಲ್ಲಿಯೂ ಟ್ರಂಪ್ ಜಯಗಳಿಸಿದ್ದರು. ಆದರೆ, ಈ ಬಾರಿ ವಿಜಯಮಾಲೆ ಬೈಡೆನ್ ಪಾಲಿಗೆ ಒಲಿದಿದೆ.