ನ್ಯೂಸ್

ಚುನಾವಣಾ ರೇಸ್‌ನಿಂದ ಹಿಂದೆ ಸರಿದ ಜೋ ಬೈಡನ್​! ಒತ್ತಡದ ಬೆನ್ನಲ್ಲೇ ನಿರ್ಗಮನ?

ಮೋಹನ್​ ಶೆಟ್ಟಿ

ವಾಷಿಂಗ್ಟನ್: ನವೆಂಬರ್‌ನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಸೋಲಿಸುವ ಮಾರ್ಗವು ಇದೀಗ ಕಣ್ಮರೆಯಾಯಿತು ಎಂಬ ಎಚ್ಚರಿಕೆಯನ್ನು ಧ್ವನಿಸುತ್ತಿರುವ ಡೆಮಾಕ್ರಟಿಕ್ ನಾಯಕರ ತೀವ್ರ ಒತ್ತಡದ ಬೆನ್ನಲ್ಲೇ ಚುನಾವಣಾ ರೇಸ್​ನಿಂದ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿದಿದ್ದಾರೆ.

ತಮ್ಮ ಅಧ್ಯಕ್ಷೀಯ ಮರುಚುನಾವಣೆಯ ಪ್ರಚಾರವನ್ನು ಕೊನೆಗೊಳಿಸುವುದಾಗಿ ಇಂದು (ಜು.21) ಅಧ್ಯಕ್ಷ ಜೋ ಬೈಡನ್ ಅಧಿಕೃತವಾಗಿ​ ಘೋಷಿಸಿದ್ದಾರೆ. ಇದೀಗ ಚುನಾವಣಾ ದಿನಕ್ಕೆ ಕೇವಲ ನಾಲ್ಕು ತಿಂಗಳ ಮೊದಲೇ ಶ್ವೇತಭವನದ ಓಟದಿಂದ ಜೋ ಬೈಡನ್​ ದಿಢೀರ್​ ಹಿಂದೆ ಸರಿದಿರುವುದು ಅನೇಕರಲ್ಲಿ ಭಾರೀ ಆಶ್ಚರ್ಯ ಉಂಟುಮಾಡಿದೆ.

ಇದನ್ನು ಸ್ವತಃ ಅವರೇ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ದೇಶದ ಹಾಲಿ ಅಧ್ಯಕ್ಷರೂ ಆಗಿರುವ ಬೈಡೆನ್ ಇದೇ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿದ್ದರು. ಅವರಿಗೆ 81 ವರ್ಷ ವಯಸ್ಸಾಗಿದ್ದು, ಚುನಾವಣೆ ಸಂಬಂಧದ ಬಹಿರಂಗ ಸಭೆಗಳಲ್ಲಿಯೇ ಅವರ ಮರೆಗುಳಿತನದ ಘಟನೆಗಳು ಸಂಭವಿಸಿ ಜಗತ್ತಿನಾದ್ಯಂತ ಚರ್ಚೆಗೀಡಾಗಿದ್ದವು. ಇದರಿಂದಾಗಿ ಸ್ವಪಕ್ಷೀಯರೇ ಅವರ ಉಮೇದುವಾರಿಕೆಯನ್ನು ವಿರೋಧಿಸತೊಡಗಿದ್ದರು.

ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸುವ ಸಾಮರ್ಥ್ಯ ಬೈಡೆನ್ ಅವರಿಗಿಲ್ಲ ಎಂದು ನೇರವಾಗಿ ಟೀಕಿಸಿದ್ದರು. ಕಳೆದ ವಾರವಷ್ಟೇ ಬೈಡೆನ್‌ಗೆ ಕೋವಿಡ್ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.