ಶಿಕಾಗೋ: ಜುಲೈ 22ರಂದು ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಿಂದ ದಿಢೀರ್ ಹಿಂದೆ ಸರಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್, ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾದರು. ನನಗೆ ವಯಸ್ಸಾಯಿತು, ಎಲೆಕ್ಷನ್ ಓಟದಿಂದ ಹಿಂದೆ ಸರಿದಿರುವುದು ಅಧಿಕೃತ. ನನ್ನ ಜಾಗಕ್ಕೆ ಕಮಲಾ ಹ್ಯಾರಿಸ್ರನ್ನು ನಿಲ್ಲಿಸುವೆ, ಅವರನ್ನು ಗೆಲ್ಲಿಸಿ ಎಂದು ಬೈಡನ್ ತಿಳಿಸಿದ್ದರು. ಇಂದು ಅಮೆರಿಕಾದ ಶಿಕಾಗೋದಲ್ಲಿ ನಡೆದ ಡೆಮಾಕ್ರೆಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಜೋ, ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳುವಾಗ ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಕಣ್ಣೀರಿಟ್ಟರು.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಹಿಂದೆ ಸರಿಯುತ್ತಿದ್ದಂತೆಯೇ ಅವರ ಸ್ಥಾನದಲ್ಲಿ ಉಮೇದುವಾರಿಕೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸ್ಪರ್ಧಿಸುವುದು ಖಚಿತವಾಯಿತು. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಚುನಾವಣಾ ಅಖಾಡದಲ್ಲಿ ಕಣಕ್ಕಿಳಿಯಲಿದ್ದು, ಭರ್ಜರಿ ಪೈಪೋಟಿಗೆ ಸಿದ್ಧರಾಗಿದ್ದಾರೆ. ಇನ್ನು ಶಿಕಾಗೋದಲ್ಲಿ ಇಂದು ನಡೆದ ಸಮಾವೇಶ ಕಾರ್ಯಕ್ರಮ ಭಾವುಕತೆಗೆ ಸಾಕ್ಷಿಯಾಗಿದ್ದು, ವೇದಿಕೆಯಲ್ಲಿ ಅಮೆರಿಕಾ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಬೈಡನ್, ನಿಮ್ಮನೆಲ್ಲಾ ತುಂಬ ಪ್ರೀತಿಸುವೆ ಎಂದು ಕಣ್ಣೀರಿಟ್ಟರು.
"ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ಅಭಿನಂದನೆಗಳು. ಡೊನಾಲ್ಡ್ ಟ್ರಂಪ್ ಎದುರು ಗೆದ್ದು ಬನ್ನಿ, ನಿಮಗೆ ಜನತೆಯ ಆರ್ಶಿವಾದವಿದೆ" ಎಂದರು. ಕಮಲಾರ ಸಾಮರ್ಥ್ಯಗಳನ್ನು ಮೆಚ್ಚಿ ಮಾತನಾಡಿದ ಬೈಡನ್, ನೀವೆಲ್ಲಾ ಸೇರಿ ಹ್ಯಾರಿಸ್ರನ್ನು ಗೆಲ್ಲಿಸಬೇಕು ಎಂದು ಹೇಳುತ್ತ ಕಣ್ಣೀರಾದರು. ಈ ವೇಳೆ ತಮ್ಮ ಪುತ್ರಿಯನ್ನು ಪಕ್ಷದ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಪರಿಚಯಿಸುವ ವೇಳೆಯೂ ಜೋ ಬೈಡನ್ ಭಾವುಕರಾದರು,(ಏಜೆನ್ಸೀಸ್).