ಶಿವಮೊಗ್ಗ: ನಗರದ ಸೈನ್ಸ್ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಬರೋಬ್ಬರಿ ಒಂದು ಸಾವಿರ ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ನೋಂದಣಿಯಾಗಿದ್ದ 5,738ರಲ್ಲಿ 3,756 ಅಭ್ಯರ್ಥಿಗಳು ಹಾಜರಾಗಿದ್ದು 767 ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ(ಕೆಎಸ್‌ಡಿಸಿ), ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ಪ್ರಸ್ತುತ 78 ಅಭ್ಯರ್ಥಿಗಳ ಆದೇಶಪತ್ರ ಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು 20 ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಿದರು.
ಬೃಹತ್ ಉದ್ಯೋಗ ಮೇಳದಲ್ಲಿ ಬೆಳಗ್ಗೆಯಿಂದಲೇ ತೆರೆಯಲಾದ ವಿವಿಧ ಮಳಿಗೆಗಳಲ್ಲಿ ಉದ್ಯೋಗಾಕಾಂಕ್ಷಿಗಳು ಸರತಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಂಡರು. ಕಾಲೇಜಿನ ಕೊಠಡಿಗಳಲ್ಲಿ ಸಂದರ್ಶನ ನಡೆಸಿ ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಸಾವಿರಾರು ಯುವಕ-ಯುವತಿಯರಿಗೆ ನೇಮಕಾತಿ ಪತ್ರ ವಿತರಣೆ ಮಾಡಿದ್ದು ವಿಶೇಷವಾಗಿತ್ತು. ಉದ್ಯೋಗ ಮೇಳ ಹಿನ್ನೆಲೆಯಲ್ಲಿ ನಗರದ ವಿವಿಧ ಸೈಬರ್ ಸೆಂಟರ್, ಕರ್ನಾಟಕ ಒನ್‌ಗಳಿಗೆ ತೆರಳಿ ಸ್ವವಿವರ (ರೆಸ್ಯೂಮ್) ಸಿದ್ಧಪಡಿಸಿಕೊಂಡು ತೆರಳಿದರು. ಶಿವಮೊಗ್ಗ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಉದ್ಯೋಗಾಕಾಂಕ್ಷಿಗಳು ಬಂದಿದ್ದರು.