ಶಿವಮೊಗ್ಗ: ವಿದ್ಯಾರ್ಥಿಗಳು, ಯುವ ಪೀಳಿಗೆ ಕೇವಲ ಯಾವುದೋ ಒಂದು ಕ್ಷೇತ್ರಕ್ಕೆ ಸಿಮೀತವಾಗದೇ ಕೃಷಿ, ಕೈಗಾರಿಕಾ, ಸಾರ್ವಜನಿಕ ಕ್ಷೇತ್ರಗಳಲ್ಲೂ ಕೆಲಸ ಮಾಡುವಂತಾಗಬೇಕು. ಆ ಮೂಲಕ ಬಲಾಢ್ಯ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಸಲಹೆ ನೀಡಿದರು.
ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಕುವೆಂಪು ವಿಶ್ವವಿದ್ಯಾಲಯ ಹಾಗೂ ಕನೆಕ್ಟಿಂಗ್ ಎಜುಕೇಷನ್ ಆ್ಯಂಡ್ ಎಂಟರ್ಪ್ರೈಸಸ್ ಸಹಯೋಗದೊಂದಿಗೆ ಉದ್ಯೋಗ ಮೇಳ-2023 ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಜನತೆ ನಾಲ್ಕು ಗೋಡೆಗಳ ನಡುವೆ ಬೆಳೆದು ಜಗತ್ತನ್ನು ಅರ್ಥೈಸಿಕೊಳ್ಳಲು ವಿಫಲವಾಗುತ್ತಿದೆ. ಸಹಜವಾಗಿ ಆ ಗೋಡೆಗಳಿಂದಾಚೆ ಬಂದಾಗ ಮಾತ್ರ ಈ ಜಗತ್ತು ಅರ್ಥವಾಗುತ್ತದೆ. ವಿದ್ಯಾರ್ಥಿಗಳು ಜಗದಗಲ ಮುಗಿಲಗಲ ಬೆಳೆಯಬೇಕು. ಅದಕ್ಕೆ ನಮ್ಮ ವಿಶ್ವವಿದ್ಯಾಲಯವು ಸದಾ ಸಹಕಾರ ನೀಡುತ್ತಿದೆ ಎಂದರು.
ಸಾವಿರಾರು ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು ಉದ್ಯೋಗ ಪಡೆಯಲು ಕಠಿಣ ಪರಿಶ್ರಮ ಬೇಕಾಗುತ್ತದೆ. ಜಗತ್ತಿನಾದ್ಯಂತ ಸಾಕಷ್ಟು ಕಂಪನಿಗಳಿವೆ. ಆದರೆ ಉದ್ಯೋಗ ಗಿಟ್ಟಿಸುವಲ್ಲಿ ಕೌಶಲವನ್ನೂ ಕರಗತ ಮಾಡಿಕೊಳ್ಳಬೇಕಿದೆ. ಈಗಾಗಲೇ ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, 4 ಸಾವಿರ ಉದ್ಯೋಗಾಕಾಂಕ್ಷಿಗಳು ನೋಂದಾಣಿಯಾಗಿದ್ದಾರೆ. ಉದ್ಯೋಗ ಮೇಳ ಇಷ್ಟಕ್ಕೆ ಮಾತ್ರ ಸಿಮೀತವಾಗದೆ ಮುಂದಿನ ದಿನಗಳಲ್ಲಿ 100 ಕಂಪನಿಗಳು ಒಳಗೊಂಡಂತೆ ದೊಡ್ಡಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಕುವೆಂಪು ವಿವಿ ಕುಲಸಚಿವ ಪ್ರೊ. ಎಸ್.ಕೆ.ನವೀನ್‌ಕುಮಾರ್, ವಿವಿ ಪ್ಲೇಸ್‌ಮೆಂಟ್ ಅಧಿಕಾರಿ ಡಾ. ಕೆ.ಆರ್.ಮಂಜುನಾಥ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ಬಿ.ಧನಂಜಯ, ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಪ್ರೊ. ಎಂಕೆ.ವೀಣಾ, ವಿಜ್ಞಾನ ಕಾಲೇಜು ಪ್ರಾಚಾರ್ಯೆ ಪ್ರೊ. ಎನ್.ರಾಜೇಶ್ವರಿ ಉಪಸ್ಥಿತರಿದ್ದರು.