ನವದೆಹಲಿ: ನಿಜಾಮುದ್ದೀನ್ ಮರ್ಕಜ್ ಮಸೀದಿಯ ವಿವಾದ ದೊಡ್ಡದಾಗುತ್ತಿದೆ. ಕರೊನಾ ವೈರಸ್ ನಿಯಂತ್ರಣದ ಕ್ರಮವಾಗಿ ದೆಹಲಿ ಸರ್ಕಾರ 144 ಸೆಕ್ಷನ್ ಜಾರಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ ಮಸೀದಿಯಲ್ಲಿ ಧಾರ್ಮಿಕ ಸಭೆ ನಡೆಸಿದ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಖಾಂಡ್ಲಾವಿ ಸೇರಿ ಹಲವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆದರೆ ಪೊಲೀಸರ ಈ ಕ್ರಮವನ್ನು ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು)ಮುಸ್ಲಿಂ ವಿದ್ಯಾರ್ಥಿಗಳ ಗುಂಪು ಕಟುವಾಗಿ ವಿರೋಧಿಸಿದೆ. ತಬ್ಲಿಘಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಮುಸ್ಲಿಮರನ್ನು ನೀವು ಬಲಿಪಶುಗಳನ್ನಾಗಿ ಮಾಡಲು ಸಾಧ್ಯವಿಲ್ಲ. ನಾವು ತಬ್ಲಿಘಿಯ ಪರ ನಿಲ್ಲುತ್ತೇವೆ ಎಂಬಂತಹ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಾರೆ. ಎಫ್ಐಆರ್ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಹಾಗೇ ಈ ವಿದ್ಯಾರ್ಥಿಗಳ ಗುಂಪು ವಲಸೆ ಕಾರ್ಮಿಕರ ಪರವಾಗಿಯೂ ಧ್ವನಿ ಎತ್ತಿದೆ. ವಲಸಿಗರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಅವರಿಗೆ ಆಶ್ರಯ ಕಲ್ಪಿಸಿಕೊಡಿ ಎಂದು ಮನವಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜೆಎನ್ಯುದ ಈ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆಯನ್ನು ಹುಟ್ಟುಹಾಕಿದ್ದು ಸದ್ಯ ದೇಶದ್ರೋಹದ ಪ್ರಕರಣದಲ್ಲಿ ಜೈಲಿನಲ್ಲಿರುವ ಶರ್ಜೀಲ್ ಇಮಾಮ್ ಎಂಬಾತ. ಮುಸ್ಲಿಂ ವಿರೋಧಿ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸಲೆಂದೇ ಆತ ಈ ಸಂಘಟನೆಯನ್ನು ಸ್ಥಾಪಿಸಿದ್ದಾನೆ ಎಂದು ಜೆಎನ್ಯುದ ಬೇರೆ ಕೆಲವು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)