ಪೈಪ್​ ಲೈನ್​ ಕೆಲಸ ಮಾಡುತ್ತಿರುವುದು.  
ನ್ಯೂಸ್

ಜೆಜೆಎಂ ಕಾಮಗಾರಿ ತಂದಿಟ್ಟ ಸಂಕಷ್ಟ

ಕಿರುವಾರ ಎಸ್.ಸುದರ್ಶನ್

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಮನೆ ಮನೆಗೆ ನಲ್ಲಿ ಮೂಲಕ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಜಾರಿಗೆ ತಂದಿರುವ ಜಲ ಜೀವನ್​ ಮಿಷನ್​ ಯೋಜನೆಯು ಎಲ್ಲರಿಗೂ ತಲುಪಿಸುವ ಭರದಲ್ಲಿ ಅದರ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚಾಗಿದೆ.

ಯೋಜನೆಯಡಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವಾಗ ನಿಯಮಗಳನುಸಾರ ನಡೆಸದೆ ಗುತ್ತಿಗೆದಾರರು ತಮ್ಮಗಿಷ್ಟ ಬಂದಂತೆ ಕಾಮಗಾರಿ ಮಾಡಿಕೊಂಡು ಹೋಗುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಕಾಮಗಾರಿ ಅನುಷ್ಠಾನ ವೇಳೆ ಲೋಪಗಳು ಕಂಡು ಬರದಂತೆ ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಂಜಿನಿಯರ್​ಗಳು ಸ್ಥಳಕ್ಕೆ ಸಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಇರುವುದು ನ್ಯೂನತೆಗಳು ಬೆಳೆಕಿಗೆ ಬಂದಿವೆ.

ಜಿಲ್ಲೆಯಲ್ಲಿ ಒಟ್ಟು 1,815 ಹಳ್ಳಿಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಆ ಪೈಕಿ 283 ಕಾಮಗಾರಿಗಳು ಪೂರ್ಣಗೊಂಡಿವೆ. ಪೈಪ್​ಲೈನ್​ ಕಾಮಗಾರಿಗಳಲ್ಲಿ ಅಳವಡಿಸುವ ವಸ್ತುಗಳು ಐಎಸ್​ಒ ಮಾನ್ಯತೆ ಹೊಂದಿರಬೇಕು. ಸಾಕಷ್ಟು ಕಡೆ ನಳ ಅಳವಡಿಸಿದ ಮೇಲೆ ಮೀಟರ್​ ಬಾಕ್ಸ್​ಗಳನ್ನು ನಿಯಮಬಾಹಿರವಾಗಿ ಹೊರಗಡೆ ಅಳವಡಿಸಿರುವುದು ಕಂಡು ಬರುತ್ತಿದೆ.

ಕಾಮಗಾರಿಯ ಗುಣಮಟ್ಟ ಕಾಪಾಡದೆ ಇರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಕೆಲ ಗ್ರಾಮಗಳಿಗೆ ಆಗಾಗ ಭೇಟಿ ನೀಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಪ್ರವಿಣ್​ ಪಿ.ಬಾಗೇವಾಡಿ ಅವರು ಕಾಮಗಾರಿ ಪರಿಶೀಲನೆ ಮಾಡಿದ್ದಾರೆ.

ಆ ವೇಳೆ ಕಾಮಗಾರಿಗಳಲ್ಲಿ ಲೋಪಗಳು ಕಂಡು ಬಂದಿದ್ದು, ಇದರ ಸಂಬಂಧ ಈಗಾಗಲೇ ಇಬ್ಬರು ಇಂಜಿನಿಯರ್​ಗಳನ್ನು ಅಮಾನತುಗೊಳಿಸಿ ಇಲಾಖಾಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

* ಕಾಮಗಾರಿ ಷರತ್ತುಗಳೇನು...?

ನಳ ಸಂಪರ್ಕಕ್ಕಾಗಿ ಕಾಂಕ್ರಿಟ್​ ಮತ್ತು ಡಾಂಬರ್​ ರಸ್ತೆಗಳನ್ನು ಅಗೆದು ಪೈಪ್​ಲೈನ್​ ಅಳವಡಿಸಿದ ಮೇಲೆ ರಸ್ತೆಗಳನ್ನು ಮೊದಲು ಇದ್ದಂತೆ ಸರಿ ಮಾಡಿಕೊಡಬೇಕು. ಅಗೆದು ಪೈಪ್​ಲೈನ್​ ಹಾಕಿದ ಮೇಲೆ ಮುಚ್ಚದೆ ಹಾಗೆಯೇ ಬಿಡುವಂತಿಲ್ಲ. ಪೈಪ್​ಲೈನ್​ ಅಳವಡಿಸುವ ಮುನ್ನ 3 ಅಡಿ ಆಳದಲ್ಲಿ ಪೈಪ್​ಗಳನ್ನು ಅಳವಡಿಸಬೇಕು. ಡೆನ್​ ಕ್ರಾಸಿಂಗ್​ಗಳಲ್ಲಿ ಪೈಪ್​ಗಳನ್ನು ಅಳವಡಿಸುವಾಗ ಶುದ್ಧ ಕುಡಿಯುವ ನೀರಿಗೆ ಚರಂಡಿ ನೀರು ಬೆರಕೆಯಾಗದಂತೆ ನೋಡಿಕೊಳ್ಳಬೇಕು. ಆದರೆ, ಸಾಕಷ್ಟು ಕಡೆ ಚರಂಡಿಗಳ ಪಕ್ಕದಲ್ಲಿಯೇ ಪೈಪ್​ಲೈನ್​ ಹಾಕಿ ರಸ್ತೆ ಸರಿಪಡಿಸದೆ ಮುಚ್ಚದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

* ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಆರೋಪ

ಜೆಜೆಎಂ ಯೋಜನೆಯ ಕಾಮಗಾರಿಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್​ಗಳು ಕಾಲಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ನೀಡಬೇಕು. ಇದ್ಯಾವುದನ್ನು ಮಾಡದೆ ರ್ನಿಲಕ್ಷ$್ಯ ತೋರುತ್ತಿದ್ದು, ಗುತ್ತಿಗೆದಾರರು ಕಾಮಗಾರಿಗಳಲ್ಲಿ ಲೋಪಗಳನ್ನು ಎಸಗಿರುವುದು ಬೆಳಕಿಗೆ ಬಂದಿದ್ದರಿಂದ ಅವರೊಂದಿಗೆ ಇಂಜಿನಿಯರ್​ಗಳು ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ.

* ಕೆಲಸಕ್ಕೆ ಯಂತ್ರಗಳ ಬಳಕೆ

ಮಾರ್ಗಸೂಚಿ ಪ್ರಕಾರ ಜೆಸಿಬಿ ಬಳಸುವಂತಿಲ್ಲ, ಆದರೆ ಜಿಲ್ಲೆಯ ಸಾಕಷ್ಟು ಕಡೆ ಜೆಜೆಎಂ ಕಾಮಗಾರಿ ವೇಳೆ ಜೆಸಿಬಿ ಬಳಸಿ ಕಾಂಕ್ರಿಟ್​ ರಸ್ತೆಗಳನ್ನು ಪೈಪ್​ಲೈನ್​ಗಾಗಿ ಅಗೆಯಲಾಗುತ್ತಿದೆ. ಜೆಸಿಬಿಯಿಂದ ಪೂರ್ಣ ರಸ್ತೆ ಹಾಳಾಗುತ್ತಿದ್ದು, ರಸ್ತೆ ಕೊರೆಯಲು ಕಾಂಕ್ರಿಟ್​ ಕತ್ತರಿಸುವ ಯಂತ್ರಗಳನ್ನು ಬಳಸಬೇಕು.

* ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು

ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಗಳಲ್ಲಿನ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಯ ಟೆಂಡರ್​ಗಳನ್ನು ಸ್ಥಳಿಯರು ಸೇರಿ ರಾಜ್ಯ ವಿವಿಧ ಜಿಲ್ಲೆಗಳ ಗುತ್ತಿಗೆದಾರರು ಪಡೆದುಕೊಂಡಿದ್ದಾರೆ. ಕಾಲತಿಯೊಳಗೆ ಕಾಮಗಾರಿ ಮುಗಿಸಬೇಕು ಎಂದು ಷರತ್ತು ಇದ್ದರೂ ಸಹ ಕೆಲ ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಒಂದಕ್ಕಿಂತ ಹೆಚ್ಚು ಹಳ್ಳಿಗಳ ಟೆಂಡರ್​ ಪಡೆದುಕೊಂಡಿರುವ ಕೆಲವರು ವಿನಾಕಾರಣ ಕೆಲಸ ಮುಗಿಸಲು ಮುಂದಾಗುತ್ತಿಲ್ಲ. ಕೆಲಸ ವಿಳಂಬ ಕುರಿತು ಅಧಿಕಾರಿಗಳು ಪ್ರಶ್ನೆ ಮಾಡಿದರೆ ಜನಪ್ರತಿನಿಧಿಗಳಿಂದ ದೂರವಾಣಿ ಕರೆ ಮಾಡಿಸುವ ಕೆಲಸ ಮಾಡುತ್ತಾರೆ. ಗುತ್ತಿಗಾರರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನುಂಗಲಾದ ತುತ್ತಾಗಿದೆ.

ಕೋಟ್​...

ಗುತ್ತಿಗೆದಾರು ಹೆಚ್ಚು ಕಾಮಗಾರಿ ಪಡೆದುಕೊಂಡು ಒಂದೇ ಸಾರಿ ಕೆಲಸಗಳನ್ನು ಶುರು ಮಾಡಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತಿಲ್ಲ. ಭಾಗಶ@ ಕೆಲಸ ಮುಗಿಸುವ ತನಕ ಸಮಸ್ಯೆಯಾಗುತ್ತದೆ. ಜನರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಕೆಲಸಗಳನ್ನು ಮುಗಿಸಲು ಸೂಚಿಸಲಾಗುವುದು.

- ಶಿವಕುಮಾರ್​, ಉಪ ಕಾರ್ಯದರ್ಶಿ, ಜಿಪಂ ಕೋಲಾರ

ಕೋಟ್​...

ಜೆಜೆಎಂ ಕಾಮಗಾರಿಗಳಿಂದ ಗ್ರಾಮೀಣ ಭಾಗಗಳಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಕೆಲಸಗಳನ್ನು ಸಹ ವೈಜ್ಞಾನಿಕವಾಗಿ ಮಾಡದೆ ಗುತ್ತಿಗೆದಾರರು ಮನಸ್ಸೋ ಇಚ್ಚೆ ಮಾಡುತ್ತಿದ್ದಾರೆ. ಇದರ ಪರಿಶೀಲನೆ ಮಾಡಬೇಕಾಗಿರುವ ಅಧಿಕಾರಿಗಳು ಮೌನವಾಗಿದ್ದಾರೆ ಯಾಕೋ ಅರ್ಥವಾಗುತ್ತಿಲ್ಲ.

- ರಮೇಶ್​, ಗ್ರಾಮಸ್ಥ, ತೊಟ್ಲಿ