ನ್ಯೂಸ್

ಜಿಗಜಿಣಗಿ ಬಾಯಲ್ಲಿ ನಿವೃತ್ತಿ ಮಾತು, ಕಣ್ಣೀರು

malli

ವಿಜಯಪುರ: ಶನಿವಾರ ಬೆಳಗ್ಗೆಯಷ್ಟೇ ರಾಜಕೀಯ ನಿವೃತ್ತಿ ಕುರಿತ ಮಾತುಗಳನ್ನಾಡುವ ಮೂಲಕ ಗಮನ ಸೆಳೆದ ಸಂಸದ ರಮೇಶ್ ಜಿಗಜಿಣಗಿ, ಮಧ್ಯಾಹ್ನ ತುಂಬಿದ ಸಭೆಯಲ್ಲಿ ಕಣ್ಣಲ್ಲಿ ನೀರು ಜಿನುಗಿಸುವ ಮೂಲಕ ಕುತೂಹಲ ಮೂಡಿಸಿದರು.

ಅಭಿವೃದ್ಧಿ ಕಾಮಗಾರಿಗಳ ಕುರಿತ ಸುದ್ದಿಗೋಷ್ಠಿಯಲ್ಲಿ, ‘ರಾಮಕೃಷ್ಣ ಹೆಗಡೆ ಅವರಂಥ ಸೈದ್ಧಾಂತಿಕ ನಾಯಕರ ಗರಡಿಯಲ್ಲಿ ಬೆಳೆದವನು ನಾನು. ರಾಜಕೀಯಕ್ಕೆ ಗೌರವದಿಂದ ಬಂದಿದ್ದೇನೆ. ಗೌರವದಿಂದಲೇ ನಿರ್ಗಮಿಸುತ್ತೇನೆ’ ಎಂದರು. ಜಿಲ್ಲೆಯ ಬಹುದಿನದ ಬೇಡಿಕೆಯಾದ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಸಂಪುಟ ಸಭೆಯಲ್ಲಿ ಅದಕ್ಕೊಂದು ರ್ತಾಕ ಅಂತ್ಯ ಸಿಗಲಿದೆ. ವಿಮಾನ ಹಾರಿಸಿಯೇ ನಿವೃತ್ತಿಯಾಗುವ ವಿಚಾರ ಮಂಡಿಸುವೆ ಎಂದಿದ್ದು ಗಮನಾರ್ಹ.

ಹಿಟ್ನಳ್ಳಿ ಕೃಷಿ ವಿವಿಯಲ್ಲಿ ನಡೆದ ಕೃಷಿ ಮೇಳ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡ ಜಿಗಜಿಣಗಿ, ನನ್ನ ‘ದವಣಿ’ಯಲ್ಲೇ ಬೆಳೆದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದು ಅತೀವ ಸಂತಸ ತಂದಿದೆ. ಅವರು ಹೀಗೆ ಮುಂದೆ ಸಾಗಲಿ. ನಾನು ದೂರದಿಂದಲೇ ಹಿಂಬಾಲಿಸುತ್ತ ಅವರ ಏಳಿಗೆ ಕಂಡು ಸಂತೋಷ ಪಡುತ್ತೇನೆಂದರು.

ಬಳಿಕ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡುತ್ತ, ‘ಅಂಬೆಗಾಲಿಡುವುದರಿಂದ ಹಿಡಿದು ನನ್ನ ಕಿರುಬೆರಳು ಹಿಡಿದು ರಾಜಕೀಯ ದಲ್ಲಿ ಮುನ್ನಡೆಸಿದವರು ರಮೇಶ್ ಜಿಗಜಿಣಗಿ. ಇಂದು ನಾನು ಮತ್ತು ಕಾರಜೋಳ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದೇವೆಂದರೆ ಅದಕ್ಕೆ ಪರೋಕ್ಷವಾಗಿ ಜಿಗಜಿಣಗಿ ಅವರೇ ಕಾರಣ’ ಎನ್ನುತ್ತಿದ್ದಂತೆ ಜಿಗಜಿಣಗಿ ಕಣ್ಣಲ್ಲಿದ್ದ ನೀರು ಕಪಾಳ ದಾಟಿ ಕೆಳಗಿಳಿದವು.

ಡಿಸಿಎಂ ಹುದ್ದೆ ಸೃಷ್ಟಿಸಿದ್ದು ಮುಖ್ಯ ಮಂತ್ರಿಗಳು. ಮುಂದುವರಿಸುವ ಮತ್ತು ಕೈಬಿಡುವ ಪರಮಾಧಿಕಾರ ಅವರಿಗೇ ಇದೆ. ನಾನೆಂದೂ ಅಧಿಕಾರದ ಹಿಂದೆ ಬಿದ್ದವನಲ್ಲ. ಆರು ತಿಂಗಳಲ್ಲಿ ಯಾವುದಾದರೂ ಸಾಂವಿಧಾನಿಕ ಹುದ್ದೆಗೆ ನನ್ನನ್ನು ಆಯ್ಕೆ ಮಾಡುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದು. | ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ