ನ್ಯೂಸ್

ಐದೇ ದಿನದಲ್ಲಿ ಕರೊನಾದಿಂದ ಚೇತರಿಸಿಕೊಂಡರೂ ಸಾವು ಬೆನ್ನು ಬಿಡಲಿಲ್ಲ ಈ ಸಚಿವರಿಗೆ...

ರಾಂಚಿ: ಜಾರ್ಖಂಡದ ಈ ಸಚಿವರು ಕರೊನಾ ಮಣಿಸಿದರೂ..ಸಾವನ್ನು ಗೆಲ್ಲಲಾಗಲಿಲ್ಲ.

ಸೆಪ್ಟೆಂಬರ್​ 26ರಂದು ಕರೊನಾ ಸೋಂಕಿಗೆ ಒಳಗಾಗಿದ್ದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಜಿ ಹುಸೇನ್​ ಅನ್ಸಾರಿ ಅವರು ನಿನ್ನೆಯಷ್ಟೇ ಟ್ವೀಟ್​ ಮಾಡಿ, ತಾವು ಕರೊನಾದಿಂದ ಪಾರಾಗಿದ್ದಾಗಿ ಹೇಳಿದ್ದರು. ಆದರೆ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಸೇನ್ ಅನ್ಸಾರಿಗೆ 73 ವರ್ಷ ವಯಸ್ಸಾಗಿತ್ತು.

ಸೆಪ್ಟೆಂಬರ್​ 26ರಂದು ಟ್ವೀಟ್ ಮಾಡಿದ್ದ ಅನ್ಸಾರಿ ಅವರು, ನಾನು ಕರೊನಾ ಟೆಸ್ಟ್​ಗೆ ಒಳಪಟ್ಟಿದ್ದೆ. ನನ್ನ ರಿಪೋರ್ಟ್​ ಪಾಸಿಟಿವ್​ ಎಂದು ಬಂದಿದೆ. ಸದ್ಯ ರಾಂಚಿಯ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಶೀಘ್ರದಲ್ಲೇ ಗುಣಮುಖನಾಗುತ್ತೇನೆ ಎಂದಿದ್ದರು. ಹಾಗೇ ನಿನ್ನೆ ಟ್ವೀಟ್ ಮಾಡಿ, ನನ್ನ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದಿದ್ದರು. ಅಷ್ಟೇ ಅಲ್ಲ ಅವರ ಕರೊನಾ ಟೆಸ್ಟ್​ ರಿಪೋರ್ಟ್​ ನೆಗೆಟಿವ್​ ಬಂದಿದ್ದಾಗಿ ವೈದ್ಯರೇ ತಿಳಿಸಿದ್ದಾರೆ.

ಸಚಿವರು ಮೃತಪಟ್ಟಿದ್ದು ಕೊವಿಡ್​-19 ನಿಂದಲ್ಲ. ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಯವಿಟ್ಟು ಇಡೀ ಬಾಲಿವುಡ್ಡನ್ನೇ ಹಾಗೆ ನೋಡ್ಬೇಡಿ: ಅಕ್ಷಯ್​ ಕುಮಾರ್ ಕೈಮುಗಿದು ಹೇಳಿದ್ದೇನು?

ಹಾಜಿ ಹುಸೇನ್​ ಅನ್ಸಾರಿ ಅವರು ದಿಯೋಘರ್‌ನ ಮಧುಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ಮಾರ್ಚ್​​ನಲ್ಲಿ ತಬ್ಲಿಘಿ ಜಮಾತ್​ ಸಮಾವೇಶದಲ್ಲಿ ಪಾಲ್ಗೊಂಡಿದ ಅನ್ಸಾರಿ ಮತ್ತು ಅವರ ಪುತ್ರ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. (ಏಜೆನ್ಸೀಸ್​)