ನ್ಯೂಸ್

‘ಪಿಎಂ ಕೇರ್ಸ್‌’ಗೆ ದೇಣಿಗೆ ನೀಡಿ- ‘ಆರೋಗ್ಯ ಸೇತು’ ಡೌನ್‌ಲೋಡ್‌ ಮಾಡಿ: ಜಾರ್ಖಂಡ್‌ ಹೈಕೋರ್ಟ್‌ ಹೇಳಿದ್ದು ಯಾವ ಮುಖಂಡರಿಗೆ?

ರಾಂಚಿ (ಜಾರ್ಖಂಡ): ಆರೋಪಿ ಅಥವಾ ಅಪರಾಧಿಗಳಿಗೆ ಜಾಮೀನು ನೀಡುವಾಗ ನ್ಯಾಯಾಲಯಗಳು ಹಲವಾರು ರೀತಿಯ ಷರತ್ತುಗಳನ್ನು ವಿಧಿಸುತ್ತದೆ. ಸಾಮಾನ್ಯವಾಗಿ ಎಲ್ಲ ಷರತ್ತುಗಳೂ ಒಂದೇ ರೀತಿಯಲ್ಲಿ ಇರುತ್ತವೆ. ಆದರೆ ಜಾರ್ಖಂಡ್‌ ಹೈಕೋರ್ಟ್‌ನಿಂದ ಅಪರೂಪದ ಹಾಗೂ ಈ ಸಂದರ್ಭದಲ್ಲಿ ತುರ್ತು ಅಗತ್ಯವೂ ಆಗಿರುವಂಥ ಆದೇಶವೊಂದು ಹೊರಬಿದ್ದಿದೆ.

ಪ್ರಧಾನ ಮಂತ್ರಿಗಳ ನಾಗರಿಕ ಸಹಾಯಕ ಮತ್ತು ತುರ್ತು ಪರಿಹಾರ ಸಂದರ್ಭಗಳ ನಿಧಿಗೆ (ಪಿಎಂ ಕೇರ್ಸ್‌) ತಲಾ 35 ಸಾವಿರ ರೂಪಾಯಿಗಳ ದೇಣಿಗೆ ನೀಡುವಂತೆ ಹಾಗೂ ಜಾಮೀನಿನ ಮೇಲೆ ಹೊರಗಡೆ ಹೋದ ತಕ್ಷಣವೇ ಕರೊನಾ ನೆರವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ‘ಆರೋಗ್ಯ ಸೇತು’ ಆ್ಯ‍ಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಕೋರ್ಟ್‌ ಆಪರಾಧಿಗಳಿಗೆ ಹೇಳಿದೆ.

ಅಷ್ಟಕ್ಕೂ ಈ ಅಪರಾಧಿಗಳು ಸಾಮಾನ್ಯ ಜನರಲ್ಲ, ಬದಲಿಗೆ ಬಿಜೆಪಿಯ ಮಾಜಿ ಸಂಸದ ಸೋಮ್‌ ಮಾರಂಡಿ ಹಾಗೂ ಮುಖಂಡರಾದ ವಿವೇಕಾನಂದ ತಿವಾರಿ, ಅಮಿತ್‌ ಅಗರವಾಲ್‌, ಹಿಸಾಬಿ ರಾಯ್‌, ಸಂಚಯ‌ ವರ್ಧನ್‌ ಮತ್ತು ಅನುಗ್ರಹ ನಾರಾಯಣ್‌.

ಇವರ ವಿರುದ್ಧ 2012ರಲ್ಲಿ ದಾಖಲಾಗಿರುವ ‘ರೈಲ್‌ ರೋಕೋ’ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ಜಾರ್ಖಂಡ್‌ನ ಪಾಕೂರ್‌ನಲ್ಲಿ 2012ರಲ್ಲಿ ನಡೆದಿರುವ ರೈಲ್‌ ರೋಕೋ ಪ್ರಕರಣವಿದು. ರೈಲನ್ನು ನಿಲ್ಲಿಸುವ ಮೂಲಕ ಅಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಇವರೆಲ್ಲರ ವಿರುದ್ಧ ರೈಲ್ವೆ ಕಾಯ್ದೆ ಅಡಿ ದೂರು ದಾಖಲಾಗಿತ್ತು.

ಈ ಪ್ರಕರಣದಲ್ಲಿ ಎಲ್ಲರಿಗೂ ಒಂದು ವರ್ಷದ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಎಲ್ಲರೂ ಹೈಕೋರ್ಟ್‌ ಮೊರೆ ಹೋಗಿದ್ದರು. ಕಳೆದ ಫೆಬ್ರುವರಿಯಿಂದ ಜೈಲಿನಲ್ಲಿ ಇರುವ ಎಲ್ಲರೂ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಇನ್ನೂ ನಡೆಯುತ್ತಿದೆ. ಸದ್ಯ ಎಲ್ಲರಿಗೂ ಜಾಮೀನು ಮಂಜೂರು ಮಾಡಿರುವ ನ್ಯಾಯಮೂರ್ತಿ ಅರುಭ ರಾವತ್‌ ಚೌಧರಿ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ. (ಏಜೆನ್ಸೀಸ್‌)