ನ್ಯೂಸ್

ಕರೊನಾಗೂ ಬಗ್ಗಲ್ಲ, ಮಳೆಗೂ ಜಗ್ಗಲ್ಲ; ಸಿಬ್ಬಂದಿಗಾಗಿ ವಿಶೇಷ ಪಿಪಿಇ ಕಿಟ್​ ರೂಪಿಸಿದ ಪೊಲೀಸ್​ ಇಲಾಖೆ

ನವದೆಹಲಿ: ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವವರಿಗೆ ಅಂದರೆ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್​ ಅನಿವಾರ್ಯ.

ಇದರ ಹೊರತಾಗಿ ಕರೊನಾ ದಾಳಿಗೆ ತುತ್ತಾಗುವ ಹೆಚ್ಚು ಸಂಭಾವ್ಯತೆ ಇರುವುದು ಪೊಲೀಸರಿಗೆ. ಮುಂಬೈನಲ್ಲಿ ಈಗಾಗಲೇ 2,500ಕ್ಕೂ ಅಧಿಕ ಪೊಲೀಸರು ಕೋವಿಡ್​ಗೆ ಒಳಗಾಗಿದ್ದಾರೆ.

ಕೋವಿಡ್​ ತಡೆಯಲು ಪೊಲೀಸರು ಸಾಮಾನ್ಯ ಪಿಪಿಇ ಕಿಟ್​ ಧರಿಸಿ ಕರ್ತವ್ಯ ನಿರ್ವಹಿಸುವುದರಿಂದ ಒಂದು ಅಪಾಯವೂ ಇದೆ. ಅಡಿಯಿಂದ ಮುಡಿವರೆಗೆ ಮುಚ್ಚಿಕೊಂಡಿರುವುದು ಜನರಿಗೆ ಪೊಲೀಸರು ಯಾರು? ಇತರ ವೈದ್ಯಕೀಯ ಸಿಬ್ಬಂದಿ ಯಾರು ಎಂಬುದು ಗೊತ್ತಾಗುವುದು ಇಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಶ್ರಮಪಡಬೇಕಾಗುತ್ತದೆ.

ಈ ಕಾರಣಕ್ಕಾಗಿಯೇ ಉತ್ತರಪ್ರದೇಶದ ಝಾನ್ಸಿ ಪೊಲೀಸರು ವಿಶೇಷ ಪಿಪಿಇ ಕಿಟ್ ಅಭಿವೃದ್ಧಿಪಡಿಸಿದ್ದಾರೆ. ಇದು ಇತರ ಕಿಟ್​ಗಳಂತೆ ಬಿಳಿ ಅಥವಾ ತಿಳಿ ನೀಲಿ ಬಣ್ಣದಲ್ಲಿಲ್ಲ. ಬದಲಾಗಿ ಪಾರದರ್ಶಕವಾಗಿದೆ. ಇದನ್ನು ಧರಿಸಿದರೆ, ಪೊಲೀಸರ ಸಮವಸ್ತ್ರ ಗೋಚರಿಸುತ್ತದೆ. ಇದು ಕರ್ತವ್ಯ ನಿರ್ವಹಿಸಲು ಅನುವಾಗುತ್ತದೆ ಎನ್ನುತ್ತಾರೆ ಝಾನ್ಸಿ ಎಎಸ್​ಪಿ ಡಿ. ಪ್ರದೀಪ್​ಕುಮಾರ್​ ತಿಳಿಸಿದ್ದಾರೆ.

ಇದರ ಇನ್ನೊಂದು ಪ್ರಯೋಜನವೆಂದರೆ ಇದು ಜಲ ನಿರೋಧಕವಾಘಿದೆ. ಹೀಗಾಗಿ ಇದನ್ನು ಮಳೆಯಲ್ಲಿಯೂ ಧರಿಸಿ ಕೆಲಸ ಮಾಡಬಹುದು. ಮುಂಗಾರು ಶುರುವಾಗಿರುವುದರಿಂದ ಸಿಬ್ಬಂದಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಸದ್ಯ ಇಂಥ 1,000 ಪಿಪಿಇ ಕಿಟ್​ಗಳನ್ನು ಸಿದ್ಧಪಡಿಸಲಾಗಿದೆ.

ಕೋವಿಡ್​ ಆಸ್ಪತ್ರೆ, ಕ್ವಾರಂಟೇನ್​ ಕೇಂದ್ರ, ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಕೆಲಸ ಮಾಡುವ ಪೊಲೀಸ್​ ಸಿಬ್ಬಂದಿ ಒದಗಿಸಲಾಗುತ್ತದೆ ಎಂದು ಪ್ರದೀಪ್​ಕುಮಾರ್​ ಮಾಹಿತಿ ನೀಡಿದ್ದಾರೆ. ಇತ ಪೊಲೀಸರಿಗೂ ಇದು ಪ್ರಯೋಜನವಾಗಲಿದೆ ಎನ್ನುವ ವಿಶ್ವಾಸ ಅವರದ್ದು.