ನ್ಯೂಸ್

ಜೆ​ಫ್​ ಬೆಜೋಸ್​ ಜಗತ್ತಿನ ಕುಬೇರ!

ವಾಷಿಂಗ್ಟನ್​: ಜಗತ್ತಿನ ಅತಿದೊಡ್ಡ ಆನ್​ಲೈನ್​ ಬಿಜಿನೆಸ್​ ಕಂಪನಿ ಅಮೆಜಾನ್​ನ ಷೇರುಮೌಲ್ಯ ಮಂಗಳವಾರ ಹಠಾತ್​ ಗಗನಮುಖಿಯಾಗಿದ್ದು, ಕಂಪನಿಯ ಮಾಲೀಕ ಜೆಫ್ ಬೆಜೋಸ್​ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಮೈಕ್ರೋಸಾಫ್ಟ್‌  ಜೊತೆಗಿನ ಕ್ಲೌಡ್​ಕಂಪ್ಯೂಟಿಂಗ್​ ಒಪ್ಪಂದವೊಂದನ್ನು ರದ್ದುಪಡಿಸುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್​ ಘೋಷಿಸಿದ ಬೆನ್ನಲ್ಲೇ ಅಮೆಜಾನ್​ ಷೇರುಗಳ ಮೌಲ್ಯದಲ್ಲಿ ಶೇಕಡ 4.7 ಏರಿಕೆಯಾಗಿ ಬೆಜೋಸ್​ ಸಂಪತ್ತು ದಾಖಲೆಯ ಏರಿಕೆ ಕಂಡಿತು. ಅವರೀಗ 211 ಬಿಲಿಯನ್​ ಡಾಲರ್​ ಸಂಪತ್ತಿನ ಒಡೆಯನಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅಮೆಜಾನ್​ ಮೌಲ್ಯ ಏರಿಕೆಯಾದ್ದರಿಂದ ಬಿಜೋಸ್​ ಸಂಪತ್ತಿನಲ್ಲಿ 8.4 ಬಿಲಿಯನ್​ ಡಾಲರ್​ ಹೆಚ್ಚಳವಾಗಿ ಒಟ್ಟು ಸಂಪತ್ತು 221 ಬಿಲಿಯನ್​ ಡಾಲರ್​ಗೆ ಏರಿದೆ ಎಂದು ಬ್ಲೂಮ್​ರ್ಬಗ್​ ಬಿಲಿಯನೇರ್ಸ್​ ಇಂಡೆಕ್ಸ್​ ತಿಳಿಸಿದೆ.

ಜನವರಿಯಲ್ಲಿ ಎಲನ್​ ಮಸ್ಕ್​ ಸಂಪತ್ತು ಸಂಕ್ಷಿಪ್ತ ಅವಧಿಗೆ 210 ಬಿಲಿಯ ಡಾಲರ್​ಗೆ ಏರಿದ್ದೇ ಈ ಹಿಂದಿನ ಅತ್ಯಧಿಕ ಸಂಪತ್ತಾಗಿತ್ತು. ಬಿಜೋಸ್​ ಮತ್ತು ಎಲನ್​ ಮಸ್ಕ್​ ಇವರಿಬ್ಬರೇ ಈ ವರ್ಷದ ಪ್ರಥಮಾರ್ಧದಲ್ಲಿ ಜಗತ್ತಿನ ಕುಬೇರರಾಗಿ ಮೆರೆದಿದ್ದಾರೆ. ಆದರೆ ಮಾರ್ಚ್​ ಮಧ್ಯದಿಂದೀಚೆಗೆ ಅಮೆಜಾನ್​ ಷೇರು ಮೌಲ್ಯದಲ್ಲಿ ಶೇಕಡ 20 ಏರಿಕೆಯಾಗಿರುವುದರಿಂದ ಬೆಜೋಸ್​ ಹಿಡಿತವೇ ಬಿಗಿಯಾಗಿತ್ತು.

ಫ್ರಾನ್ಸ್​ನ ಐಷಾರಾಮಿ ಉತ್ಪನ್ನಗಳ ದಿಗ್ಗಜ ಬರ್ನಾಡ್‌​ ಅರ್ನಾಲ್ಟ್​ 168.5 ಬಿಲಿಯನ್​ ಡಾಲರ್​ ಸಂಪತ್ತಿನೊಂದಿಗೆ ಕುಬೇರರ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಆಗಿದ್ದೇನು?

2019ರಲ್ಲಿ ಮೈಕ್ರೋಸಾಫ್ಟ್‌ ಕಂಪನಿಯೊಂದಿಗೆ ಮಾಡಿಕೊಳ್ಳಲಾಗಿದ್ದ 10 ಬಿಲಿಯನ್​ ಡಾಲರ್​ ಮೊತ್ತದ ಒಪ್ಪಂದವನ್ನು ರದ್ದುಪಡಿಸುವುದಾಗಿ ಪೆಂಟಗನ್​ ಮಂಗಳವಾರ ಪ್ರಕಟಿಸಿದೆ. ಇದರಿಂದ ಅಮೆಜಾನ್​ ಕಂಪನಿಗೆ ಲಾಭವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಷೇರು ಬೆಲೆ ಏರಿಕೆ ಕಂಡಿದೆ.