ಬೆಂಗಳೂರು ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ), ಎನ್‌ಐಟಿ ಸೇರಿ ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶ ಕಲ್ಪಿಸಲು ನಡೆಸುವ ಜೆಇಇ ಮೇನ್ಸ್-1ರ ಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯ ನಾರಾಯಣ ಕೊ-ಕಾವೇರಿ ಭವನ್‌ನ 12ನೇ ತರಗತಿ ವಿದ್ಯಾರ್ಥಿ ಅಮೋಘ್ ಅಗರ್ವಾಲ್ ಕರ್ನಾಟಕದ ಟಾಪರ್ ಆಗಿದ್ದಾರೆ
.
ಅಖಿಲ ಭಾರತ ಮಟ್ಟದಲ್ಲಿ ಹರಿಯಾಣದ ಆರವ್ ಭಟ್ ಪ್ರಥಮ ಸ್ಥಾನ ಪಡೆದಿದ್ದು, ತೆಲಂಗಾಣದ ರಿಷಿ ಶೇಖರ್ ಶುಕ್ಲ ದ್ವಿತೀಯ ಮತ್ತು ಆಂಧ್ರ ಪ್ರದೇಶದ ಶೇಕ್ ಸೂರಜ್ ತೃತೀಯ ಸ್ಥಾನ ಪಡೆದಿದ್ದಾರೆ. ಅಮೋಘ್ ಅಗರ್ವಾಲ್ ಶೇ.100 ಅಂಕ ಪಡೆದಿರುವ ಏಕೈಕ ಕರ್ನಾಟಕದ ವಿದ್ಯಾರ್ಥಿಯಾಗಿದ್ದಾನೆ. ಅಖಿಲ ಭಾರತ ಮಟ್ಟದಲ್ಲಿ 11ನೇ ರ‌್ಯಾಂಕ್ ಪಡೆದಿದ್ದು, ರಾಜ್ಯದ ಟಾಪರ್ ಆಗಿದ್ದಾನೆ.
ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಜ.27ರಂದು ನಡೆಸಿದ್ದ ಜೆಇಇ 2024 ಮೇನ್ಸ್-1ರ ಲಿತಾಂಶವನ್ನು ಪ್ರಕಟಿಸಿದೆ. ಪರೀಕ್ಷೆಗೆ ನೋಂದಣಿ ಮಾಡಿದ್ದ 12,21,624 ಅಭ್ಯರ್ಥಿಗಳಲ್ಲಿ 11,70,048 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ದೇಶದ 23 ಅಭ್ಯರ್ಥಿಗಳು ಶೇ.100 ಅಂಕವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಥಮ ಸ್ಥಾನದ ಜತೆಗೆ ಇತರೆ 7 ಸ್ಥಾನಗಳನ್ನು ಪಡೆಯುವಲ್ಲಿ ತೆಲಂಗಾಣ ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಆಂಧ್ರ ಪ್ರದೇಶದ ಮೂವರು, ರಾಜಸ್ಥಾನ, ಮಹಾರಾಷ್ಟ್ರದ ವಿದ್ಯಾರ್ಥಿಗಳು ಕೂಡ ಸ್ಥಾನ ಪಡೆದಿದ್ದಾರೆ.
ಸದ್ಯಕ್ಕೆ ಭವಿಷ್ಯದ ಕುರಿತು ಯೋಚಿಸಿಲ್ಲ. ಜೆಇಇ ಮೇನ್ಸ್-2, ಅಡ್ವಾನ್ಸ್‌ಡ್ ಪರೀಕ್ಷೆಗಳಿವೆ. ಆದರೆ, ಮದ್ರಾಸ್ ಅಥವಾ ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಮುಂದುವರಿಯುವ ಆಲೋಚನೆ ಇದೆ. ಮತ್ತೊಮ್ಮೆ ಯೋಚಿಸಿ ನಿರ್ಧರಿಸಲಿದ್ದೇನೆ. - ಅಮೋಘ್ ಅಗರ್ವಾಲ್, ಜೆಇಇ ಮೇನ್ಸ್-1 ಕರ್ನಾಟಕ ಟಾಪರ್