ನವದೆಹಲಿ: ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಹಾಗೂ ಐಐಟಿ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಂ- ಮೇನ್ ( ಜೆಇಇ) ಪರೀಕ್ಷೆಯನ್ನು ಜೂನ್ನಲ್ಲಿ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ತಿಳಿಸಿದ್ದಾರೆ.
ಲಾಕ್ಡೌನ್ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಿಸಿದ ಕಾರಣದಿಂದಾಗಿ ಪರೀಕ್ಷೆಯನ್ನು ಅನಿವಾರ್ಯವಾಗಿ ಜೂನ್ಗೆ ಮುಂದೂಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಅಂತಿಮ ದಿನಾಂಕವನ್ನು ನಿಗದಿಪಡಿಸುವ ಮುನ್ನ, ವಿವಿಧ ರಾಜ್ಯಗಳ ಶಿಕ್ಷಣ ಮಂಡಳಿಗಳು, ಐಐಟಿ ಸಂಸ್ಥೆಗಳು ಸಂಬಂಧಪಟ್ಟ ಇತರರೊಂದಿಗೆ ಚರ್ಚಿಸಲಾಗುವುದು. ಬಳಿಕ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಪೋಕ್ರಿಯಾಲ್ ಹೇಳಿದ್ದಾರೆ.
ಜೆಇಇ ಮೇನ್ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಈ ಮೊದಲು ಏಪ್ರಿಲ್ 5, 7, 9 ಹಾಗೂ 11ರಂದು ಪರೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿಸಿತ್ತು. ಬಳಿಕ ಲಾಕ್ಡೌನ್ ಹಿನ್ನೆಲೆ ಮೇ ಅಂತ್ಯಕ್ಕೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಎರಡನೇ ಹಂತದ ಲಾಕ್ಡೌನ್ ಹಿನ್ನೆಲೆ ಜೂನ್ನಲ್ಲಿ ನಡೆಸುವುದಾಗಿ ಸಚಿವರು ಘೋಷಿಸಿದ್ದಾರೆ.