ನ್ಯೂಸ್

ಅತಿವೃಷ್ಟಿ ಅಧ್ಯಯನಕ್ಕೆ ಮುಂದಾದ ದಳಪತಿಗಳು

Bengaluru - Political - Shivananda Tagadur

ಬೆಂಗಳೂರು:

ಅತಿವೃಷ್ಟಿ ಸಮೀಕ್ಷೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಂದಾಗಿರುವ ಬೆನ್ನಲ್ಲಿಯೇ ಜೆಡಿಎಸ್ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ತಂಡವಾಗಿ ಪ್ರವಾಸ ಮಾಡಲು ನಿರ್ಧರಿಸಿದೆ.

ಜೆಡಿಎಸ್ ಶಾಸಕರುಗಳು ಮತ್ತು ಮಾಜಿ ಶಾಸಕರುಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡಂತೆ ಮೂರು ತಂಡಗಳನ್ನು ಮಾಡಿ ಅಧ್ಯಯನ ಪ್ರವಾಸಕ್ಕೆ ದಿನಾಂಕ ನಿಗಧಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಜೆಡಿಎಸ್ ಹಿರಿಯ ನಾಯಕರು ತಿಳಿಸಿದ್ದಾರೆ.

ಪಕ್ಷದ ವರಿಷ್ಠರಾದ ದೇವೇಗೌಡರೇ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ. ಅಲ್ಲದೆ, ಇದೆಲ್ಲವೂ ನಮ್ಮದೇ ಜವಬ್ದಾರಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿಲ್ಲ ಎನ್ನುವ ಕಾರಣಕ್ಕಾಗಿ ಅಲ್ಲಿ ಅತಿವೃಷ್ಟಿ ಅಧ್ಯಯನಕ್ಕೆ ಪಕ್ಷದ ಪ್ರಮುಖರು ಮೀನಾ ಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ದೇವೇಗೌಡರೇ ಪ್ರವಾಸಕ್ಕೆ ಮುಂದಾಗಿರುವುದು ದಳಪತಿಗಳಿಗೆ ಇರುಸು ಮುರುಸು ಉಂಟು ಮಾಡಿದೆ. ಹಾಗಾಗಿಯೇ ಮೈಚಳಿ ಮರೆತು ಪ್ರವಾಸಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಯಲ್ಲಿ ಚರ್ಚೆ ಮಾಡಿ ತಂಡಗಳನ್ನು ರಚಿಸಲಾಗುವುದು. ಒಂದು ತಂಡಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.