ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸುಮಿತ್ರಾ ಶಂಭುಲಿಂಗಯ್ಯ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷೆಯಾಗಿದ್ದ ಅಂಬುಜಾ ಉದಯಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಟ್ಟು 15 ಸದಸ್ಯರಿರುವ ಗ್ರಾಪಂನಲ್ಲಿ ತೆರವಾಗಿದ್ದ ಸಾಮಾನ್ಯ ಮಹಿಳೆ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ಶಂಭುಲಿಂಗಯ್ಯ ಹೊರತುಪಡಿಸಿ ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ತಾಲೂಕು ಜೆಡಿಎಸ್‌ನ ಸುಭದ್ರಕೋಟೆ ಎಂಬುದನ್ನು ಗ್ರಾಪಂ ಸದಸ್ಯರು ತೋರಿಸಿಕೊಟ್ಟಿದ್ದೀರಿ. ಗ್ರಾಮದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ತಿಳಿಸಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ ಮಾತನಾಡಿ, ಸಾಮಾನ್ಯ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನವಿದ್ದರೂ ಎಲ್ಲ ಸದಸ್ಯರು ಜೆಡಿಎಸ್ ಮುಖಂಡರ ಮಾರ್ಗದರ್ಶನದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸದಸ್ಯರಲ್ಲಿನ ಒಗ್ಗಟ್ಟಿನ ಸಂಕೇತವಾಗಿದೆ ಎಂದರು.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಸತೀಶಕುಮಾರ್, ತಾಪಂ ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಒ ಬಿ.ಎಸ್.ವಿಜಯ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷರನ್ನು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಕಿಕ್ಕೇರಿ ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಉದಯ್, ಮಿಲ್ ಚಂದ್ರು, ಅಶೋಕ್ ಅಭಿನಂದಿಸಿದರು.
ಗ್ರಾಪಂ ಅಧ್ಯಕ್ಷ ಈ.ರಾಜು, ಕಾರ್ಯದರ್ಶಿ ಯೋಗೇಶ್, ಸದಸ್ಯರಾದ ನಂಜುಂಡೇಗೌಡ, ಕುಮಾರ್, ದೇವರಾಜು, ಪ್ರಸನ್ನ, ಮಂಜೇಗೌಡ, ಶಂಕರ, ಅಂಬುಜಾ, ಸುವರ್ಣಾ, ನಾಗಮಣಿ, ಪಲ್ಲವಿ, ಭಾಗ್ಯಮ್ಮ, ಸುಧಾ, ಕವಿತಾ, ಗ್ರಾಮದ ಮುಖಂಡರು ಇದ್ದರು.