ಬೆಂಗಳೂರು:
ಸಮರ್ಪಕ ರಸಗೊಬ್ಬರ ಪೂರೈಕೆಗೆ ಆಗ್ರಹಿಸಿ ಮತ್ತು ಬಿಬಿಎಂಪಿಯಲ್ಲಿ ಖಾತೆ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆಗೆ ಒತ್ತಾಯಿಸಿ ಜೆಡಿಎಸ್ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು.
ಜೆಡಿಎಸ್ ನಗರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಚ್.ಎಂ. ರಮೇಶ್ ಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಜೆಡಿಎಸ್ ಕಾರ್ಯಕರ್ತರು ಕೃಷಿ ಸಚಿವ ಚಲುವರಾಯ ಸ್ವಾಮಿ ಅವರ ಪ್ರತಿಕೃತಿ ದಹನ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಎ ಖಾತಾ, ಬಿ ಖಾತಾ ಎಂದು ರಾಜಧಾನಿಯ ಜನರನ್ನು ಒಂದೆಡೆ ವಂಚಿಸುತ್ತಿದ್ದರೆ, ಮತ್ತೊಂದು ಕಡೆ ಸಮಯಕ್ಕೆ ಸರಿಯಾಗಿ ಯೂರಿಯಾ ಪೂರೈಕೆ ಮಾಡದೇ ರೈತರಿಗೂ ಮೋಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಗೊಂದಲ ನಿವಾರಣೆ ಆಗುವ ತನಕ ಖಾತೆ ಬದಲಾವಣೆ ವಂಚನೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಬಿಬಿಎಂಪಿಯನ್ನು ಆಗ್ರಹಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಬಿ ಖಾತಾದಿಂದ ಎ ಖಾತೆ ಮಾಡುವ ಕ್ರಮಕ್ಕೆ ಕಾನೂನಿನಲ್ಲಿಯೇ ಅವಕಾಶ ಇಲ್ಲ. ಕೇವಲ ಜನರ ಹಣ ಲೂಟಿ ಮಾಡಲಿಕ್ಕಾಗಿಯೇ ಇದನ್ನು ಮಾಡಲಾಗುತ್ತಿದೆ. ತಕ್ಷಣವೇ ಖಾತೆ ವಂಚನೆಯನ್ನು ನಿಲ್ಲುಸವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ಖಾತಾ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಿ ಸಾವಿರಾರು ಕೋಟಿ ರೂ ಲೂಟಿ ಮಾಡುವ ಹುನ್ನಾರ ನಡೆಸಲಾಗಿದೆ. ಖಾತಾ ಬದಲಾವಣೆ ಎನ್ನುವುದೇ ದೊಡ್ಡ ಬೋಗಸ್ ಎಂದರು.
ಈ ಹಿಂದೆ ಒಂದು ಚದರ ಮೀಟರಿಗೆ 13,800 ರೂಪಾಯಿ ತೆರಿಗೆಯನ್ನು ಬಿಬಿಎಂಪಿಯಿಂದ ವಿಧಿಸಲಾಗುತ್ತಿತ್ತು. ಕಾಂಗ್ರೆಸ್ ಸರಕಾರ ಈ ತೆರಿಗೆಯನ್ನು ಶೇ.1000 ಏರಿಕೆ ಮಾಡಿದೆ. ಅಂದರೆ 3 ರಿಂದ 6 ಲಕ್ಷ ರೂ ತನಕ ಹೆಚ್ಚಿಸಿದೆ. ಜನರಿಂದ ಇಷ್ಟೊಂದು ಹಣ ಕಟ್ಟಲು ಸಾಧ್ಯವೇ? ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ಈ ಸರ್ಕಾರ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ ಎಂದರು.
ರಸಗೊಬ್ಬರ: ಕೃತಕ ಅಭಾವ
ಉತ್ತಮ ಮಳೆಯಾಗಿ ಬಿತ್ತನೆ ಚಟುವಟಿಕೆ ಆರಂಭವಾಗುವುದಕ್ಕೆ ಸರಿಯಾಗಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ. ಇದಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರೇ ಕಾರಣ ಎಂದು ಕಿಡಿಕಾರಿದರು.
ಸೊಸೈಟಿಗಳ ಮೂಲಕ ರೈತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ರಸಗೊಬ್ಬರ ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕೇವಲ ಗ್ಯಾರಂಟಿಗಳಿಂದ ಜನರಿಗೆ ಟೋಪಿ ಹಾಕುತ್ತಿರುವ ಸರ್ಕಾರ ಅದೇ ಅನ್ನ ಕೊಡುವ ರೈತನಿಗೇ ಮೋಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ, ನಗರದ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಷ್ ರಾವ್, ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಟಿ.ತಿಮ್ಮೇಗೌಡ, ಮಾಜಿ ಉಪ ಮಹಾಪೌರ ಶ್ರೀರಾಮೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಎಂ. ಮುನಿಸ್ವಾಮಿ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಅಧ್ಯಕ್ಷ ಟಿ.ಆರ್. ತುಳಸಿರಾಮ್, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಅಧ್ಯಕ್ಷ ವಿ.ನಾಗೇಶ್ವರರಾವ್, ನಗರ ಯುವ ಘಟಕದ ಅಧ್ಯಕ್ಷ ಸ್ಯಾಮುಯಲ್, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.