ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಕೆಲಸ ಮಾಡಲಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್ ಗೆಲವಿಗೆ ತಂತ್ರ ರೂಪಿಸಲು ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅವರನ್ನು ಭೇಟಿಯಾಗುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ಅವರ ಸಂಪರ್ಕಿಸುವಂತೆ ಪಕ್ಷದ ಕೆಲ ಯುವ ಮುಖಂಡರು ಸಲಹೆ ನೀಡಿದ್ದರು. ಈಗ ಪಕ್ಷ ಅವರನ್ನು ಸಂಪರ್ಕಿಸಿದೆ ಎಂದು ಎಚ್ಡಿಕೆ ಹೇಳಿದರು.
ಇತ್ತೀಚೆಗೆ ದೆಹಲಿ ಚುನಾವಣೆಯಲ್ಲಿ ಆಪ್ ಗೆಲುವಿಗೆ ಮತ್ತು ಈ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ವೈಎಸ್ಆರ್ಪಿ ಪಕ್ಷ ಜಗನ್ಮೋಹನ್ ರೆಡ್ಡಿ ಗೆಲುವಿಗೆ ಪ್ರಶಾಂತ್ ಕಾರ್ಯ ನಿರ್ವಹಿಸಿದ್ದರು.
ಜೆಡಿಎಸ್ನ ಹಿರಿಯ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ರಾಜ್ಯದ ಪಾಲಿಗೆ ಚುನಾವಣಾ ಚಾಣಕ್ಯ ಎಂದೆನಿಸಿಕೊಂಡಿದ್ದಾರೆ. ಆದರೆ ಅವರಂತಹ ಹಿರಿಯರೇ ಮುಂದಿನ ಬಾರಿ ಪ್ರಶಾಂತ್ ಕಿಶೋರ್ ಕಾರ್ಯತಂತ್ರ ರೂಪಿಸಲು ಸಮ್ಮತಿಸಿದ್ದಾರೆ. (ಏಜೆನ್ಸೀಸ್)