ನ್ಯೂಸ್

ಮಾಲೂರಿಗೆ ಬಂದ ಪಂಚರತ್ನ ರಥಯಾತ್ರೆ: ದಾರಿಯುದ್ದಕ್ಕೂ ಎಚ್​ಡಿಕೆ ಅದ್ದೂರಿ ಸ್ವಾಗತ, ಜೆಡಿಎಸ್​ ಶಕ್ತಿ ಪ್ರದರ್ಶನ

ಕೋಲಾರ: ಮುಳಬಾಗಿಲು ಮತ್ತು ಬಂಗಾರಪೇಟೆಯಲ್ಲಿ ಯಶ್ವಸ್ವಿಯಾಗಿ ನಡೆದ ಪಂಚರತ್ನ ರಥಯಾತ್ರೆಯು ಇಂದು(ಭಾನುವಾರ) ಮಾಲೂರಿಗೆ ತಲುಪಿದೆ. ಮಾಲೂರಿನ ಕೆಂಪಸಂದ್ರದಿಂದ ರಥಯಾತ್ರೆ ಆರಂಭಗೊಂಡಿದ್ದು, ಜೆಡಿಎಸ್​ ಶಕ್ತಿ ಪ್ರದರ್ಶನ ನಡೆಯುತ್ತಿದೆ. ರಾತ್ರಿ‌ 7.15ಕ್ಕೆ ಶಿವಾರಪಟ್ಟಣದಲ್ಲಿ‌ ಗ್ರಾಮಸಭೆ ನಡೆಸುವ ಕುಮಾರಸ್ವಾಮಿ, ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ಕ್ಷೇತ್ರದ ಮಾಗೇರಿ ಗ್ರಾಮದಲ್ಲಿ ನಿನ್ನೆ(ಶನಿವಾರ) ವಾಸ್ತವ್ಯ ಹೂಡಿದ್ದ ಎಚ್.ಡಿ.ಕುಮಾರಸ್ವಾಮಿ, ರಾತ್ರಿ ಗ್ರಾಮಸಭೆ ನಡೆಸಿದ್ದರು. ಇಡೀ ಗ್ರಾಮವನ್ನು ತಳಿರು-ತೋರಣದಿಂದ ಅಲಂಕಾರ ಮಾಡಲಾಗಿತ್ತು. ಕುಮಾರಸ್ವಾಮಿ ಬರ್ತಾರೆ ಅಂತ ಮನೆಗಳ ಮುಂದೆ ರಂಗೋಲಿ ಬಿಡಿಸಿ, ಬಾಳೆಕಂದು ಕಟ್ಟಿ ಸಿಂಗರಿಸಲಾಗಿತ್ತು.

ಮಾಗೇರಿ ಗ್ರಾಮದಲ್ಲಿ ಗ್ರಾಮಸ್ಥರ ಜತೆ ಸಂವಾದ ನಡೆಸಿದ ಎಚ್​ಡಿಕೆ, ರಾತ್ರಿ 12 ಗಂಟೆವರೆಗೂ ಜನರ ಸಮಸ್ಯೆ ಆಲಿಸಿದರು. ಮಹಿಳೆಯರು, ಯುವಕರು, ರೈತರು, ವೃದ್ಧರು, ಅಂಗವಿಕರು ಸೇರಿದಂತೆ ನುರಾರು ಮಂದಿ ಎಚ್​ಡಿಕೆ ಬಳಿ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ಬಗೆಹರಿಸುವಂತೆ ಮನವಿ ಮಾಡಿದರು. ರಾತ್ರಿ ಐತಿಹಾಸಿಕ ಶ್ರೀ ವೆಂಕಟರಮಣ ದೇವಾಲಯದಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಎದ್ದ ಕೂಡಲೇ ಪತ್ರಿಕೆಗಳತ್ತ ಕಣ್ಣಾಡಿಸಿದ ಕುಮಾರಸ್ವಾಮಿ, ನಂತರ ಶ್ರೀ ವೆಂಕಟರಮಣ ದೇವರ ದರ್ಶನ ಪಡೆದರು. ಬೆಳಗ್ಗೆ ಮತ್ತೊಮ್ಮೆ ಗ್ರಾಮ ಸಭೆ ನಡೆಸಿ, ರಾಗಿ, ಟೊಮ್ಯಾಟೊ, ತರಕಾರಿ ತೋಟಗಳ ಬಗ್ಗೆ ಬೆಳಗ್ಗೆ ಮಾಹಿತಿ ಪಡೆದರು.