ಬೆಂಗಳೂರು: ಲೂಟಿಗಳಿಂದ ಖಜಾನೆ ಖಾಲಿಯಾಗಿದೆಯೇ ಹೊರತು ಗ್ಯಾರಂಟಿ ಯೋಜನೆಗಳಿಂದಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ವಂತ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಲಾರದು. ಸರ್ಕಾರದ ಸ್ವೇಚ್ಛಾಚಾರದಿಂದಾಗಿ ಅದು ಬರಿದಾಗಿದೆ ಎಂದು ಟೀಕಿಸಿದರು.
ವಿಧಾನ ಪರಿಷತ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಮ್ಮಾ ತಾಯಿ, ಅನುದಾನ ನೀಡಿ ಎಂದು ಹೇಳಿದ್ದನ್ನು ಲೇವಡಿ ಮಾಡಿದರು. ನಿರ್ಗತಿಕರ ಹಾಗೆ ಬೇಡುವ ದೈನೇಸಿ ಸ್ಥಿತಿ ಮುಖ್ಯಮಂತ್ರಿಗೆ ಬರಬಾರದಿತ್ತು ಎಂದು ಛೇಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಮಾತುಕತೆ ಕುರಿತ ಪ್ರಶ್ನೆಗೆ, ಅಲಯನ್ಸ್ ಹಾಗೂ ಸೀಟು ಶೇರಿಂಗ್ನಲ್ಲಿ ಸಮಸ್ಯೆ ಇಲ್ಲ. ನಮ್ಮ ಉದ್ದೇಶ ರಾಜ್ಯದ ಈ ಕೆಟ್ಟ ಸರ್ಕಾರ ಕಿತ್ತು ಹಾಕುವುದು. 28 ಸ್ಥಾನ ಗೆಲ್ಲಬೇಕು ಎಂಬುದು. ಗಂಟಲು ಸಮಸ್ಯೆಯಿಂದ ನಾನು ವಿಧಾನಸಭಾ ಕಲಾಪದಲ್ಲಿ ಭಾಗವಹಿಸಿಲ್ಲ. ವೈದ್ಯರು ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ ಎಂದರು. ಸೋಮವಾರ ರಾಜಭವನ ಚಲೋ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಾವು (ಬಿಜೆಪಿ-ಜೆಡಿಎಸ್) ಏನೇ ತೀರ್ಮಾನ ಮಾಡಿದರೂ ಒಟ್ಟಿಗೆ ಮಾಡುತ್ತೇವೆ ಎಂದರು.
ಡಾ. ಮಂಜುನಾಥ್ ಅವರದ್ದೇ ತೀರ್ಮಾನ: ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಚುನಾವಣೆ ಸ್ಪರ್ಧೆ ಬಗ್ಗೆ ಅವರೇ ತೀರ್ವನಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತಿರುವ ಪ್ರಶ್ನೆಗೆ, ಅವರು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಸಮಯ ಬಂದಾಗ ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ಪ್ರತಿಕ್ರಿಯಿಸಿದರು. ರಾಜ್ಯಸಭಾ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿ ಗೆಲ್ಲುವ ಕುರಿತ ಪ್ರಶ್ನೆಗೆ, ನಮ್ಮ ಆಸೆ ಈಡೇರುತ್ತದೆಯೇ ಎಂಬುದನ್ನು ಫೆ.27 ರಂದು ಸಂಜೆ ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.