ನ್ಯೂಸ್

ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್; ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ವ್ಯಾಖ್ಯಾನ

ಬೆಂಗಳೂರು: ರಾಜಕಾರಣವೆಂದರೆ ಗಣಿತ ಮಾತ್ರವಲ್ಲ, ಕೆಮಿಸ್ಟ್ರಿ ಇರುತ್ತದೆ. ಸಂಖ್ಯಾಬಲದ ಲೆಕ್ಕಾಚಾರದೊಂದಿಗೆ ಸಮೀಕರಣದ ತಂತ್ರಗಾರಿಕೆಯಿರುತ್ತದೆ, ಇದು, ಜೆಡಿಎಸ್ ಪಕ್ಷವು ಎನ್‌ಡಿಎ ಭಾಗವಾಗಿದ್ದರ ಕುರಿತು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ವ್ಯಾಖ್ಯಾನ.

ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ರಾಜಕಾರಣದ ಕೆಮಿಸ್ಟ್ರಿ ಕಾರ್ಯಕರ್ತರ ಹಂತದಲ್ಲೇ ಸಮನ್ವಯ ಆಗುವ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಎರಡೂ ಪಕ್ಷಗಳಿಗಿದೆ ಎಂದರು.

ರಾಜ್ಯದಲ್ಲಿ ಬರಗಾಲ, ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆಗಳು ಹಾಗೂ ಕುಡಿಯುವ ನೀರಿನ ಅವಶ್ಯಕತೆ ಗೊತ್ತಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗಿದೆ. ಐಎನ್‌ಡಿಐಒ ಒಕ್ಕೂಟ ಗಟ್ಟಿಗೊಳಿಸಲು ಕಾಂಗ್ರೆಸ್ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.

ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶ ಹಾಗೂ ರಾಜ್ಯದ ಜನರ ಹಿತವನ್ನು ಬಲಿಕೊಟ್ಟು, ರಾಜಕೀಯ ಹಿತ ಕಾಪಾಡಿಕೊಳ್ಳಲು ಆದ್ಯತೆ ನೀಡಿದೆ. ಸರ್ಕಾರದ ಈ ವೈಲ್ಯ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಬಿಜೆಪಿ ಬೆಂಬಲಿಸುತ್ತದೆ ಎಂದು ಹೇಳಿದರು.

ಕುಮ್ಮಕ್ಕು ಆರೋಪ

ಅಕ್ರಮ ಗೋಹತ್ಯೆ, ದೊಡ್ಡಮಟ್ಟದಲ್ಲಿ ಗೋಮಾಂಸ ಸಾಗಾಟದ ಹಿಂದೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿದೆ ಎಂದು ಆರೋಪಿಸಿದ ಸಿ.ಟಿ.ರವಿ, ಈ ದಂಧೆ ತಡೆಯಲಾಗದಿದ್ದರೆ ಗೋಹತ್ಯೆ ನಿಷೇಧ ಕಾಯ್ದೆ ಔಚಿತ್ಯವೇನು ? ಎಂದು ಕೇಳಿದರು.