ಕೊತ್ತೂರು ಜಿ.ಮಂಜುನಾಥ್​  
ನ್ಯೂಸ್

ಬಿಜೆಪಿ ಕೈಗೊಂಬೆಯಾಗಿರುವ ಜೆಡಿಎಸ್​

ಕೋಲಾರ: ಜೆಡಿಎಸ್​ನವರು ಈಗಾಗಲೇ ಬಿಜೆಪಿ ಕೈಗೊಂಬೆಯಾಗಿದ್ದು, ಅವರ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್​ ಬಗ್ಗೆ ಮಾತನಾಡಲು ಮುಂದಾಗಿದ್ದಾರೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸುರ್ಜೇವಾಲ ಪಕ್ಷದ ಹಿರಿಯರು ಹಾಗೂ ರಾಜ್ಯದ ಉಸ್ತವಾರಿ ಆಗಿದ್ದು, ಪಕ್ಷದ ಶಾಸಕರೊಂದಿಗೆ ಚರ್ಚೆ ನಡೆಸಿರುವುದರಲ್ಲಿ ತಪ್ಪೇನಿದೆ ಎಂದರು.

ದಮ್ಮು ತಾಕತ್ತು ನಮಗೇನೂ ಇಲ್ಲ, ಅವರಿಗೆ ಇರುವುದರಿಂದ ನಿಖಿಲ್​ ಕುಮಾರಸ್ವಾಮಿ ಅವರನ್ನು ಈಗಾಗಲೇ ಮೂರು ಚುನಾವಣೆಗಳಲ್ಲಿ ಜನ ಸೋಲಿಸಿ ಮನೆಯಲ್ಲಿ ಕೂರಿಸಿದ್ದಾರೆ. ನಾಲ್ಕನೇ ಚುನಾವಣೆಯಲ್ಲಿ ಎಲ್ಲಿ ಸೋಲುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 4 ಪಟ್ಟಣ ಪಂಚಾಯಿತಿ ಚುನಾವಣೆಗಳಿಗೆ ಆದೇಶ ಆಗಿದೆ, ವೇಮಗಲ್​ನಲ್ಲಿ ಕಾಂಗ್ರೆಸ್​ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತ. ಇದಾದ ನಂತರ ಜಿಪಂ, ತಾಪಂ, ನಗರಸಭೆ, ಗ್ರಾಪಂ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ, ರಾಜ್ಯದಲ್ಲಿ ಜನಾಭಿಪ್ರಾಯ ಕಾಂಗ್ರೆಸ್​ ಮೇಲೆ ಇದೆ ಎಂದರು.

ಶಾಸಕರು ಅವರವರ ಜಾತಿಯನ್ನು ಮುಂದಿಟ್ಟುಕೊಂಡು ಮಾತನಾಡುವುದರಲ್ಲಿ ತಪ್ಪೇನು..?, ರಾಜ್ಯದಲ್ಲಿ ಯಾವ ಶಾಸಕರಿಗೂ ಅನ್ಯಾಯವಾಗುತ್ತಿಲ್ಲ. ಸರ್ಕಾರದಿಂದ ಸಹಕಾರ ಸಿಗುತ್ತಿದೆ ಎಂದು ತಿಳಿಸಿದರು.

ದಿಶಾ ಸಭೆಯಲ್ಲಿ ಎಸ್​.ಎನ್​.ನಾರಾಯಣಸ್ವಾಮಿ ಅವರು ನಿಮ್ಮನ್ನು ಮಾತನಾಡಿಸಲಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾತನಾಡದೆ ಇರುವುದು ಒಳ್ಳೆಯ ಕೆಲಸ ಅಂತ ಅಂದುಕೊಂಡಿದ್ದೇವೆ. ಪರಸ್ಪರ ಮಾತನಾಡಿಕೊಳ್ಳಬೇಕು ಎಂಬುದೇನಿಲ್ಲ. ಚುನಾವಣೆ ಸಂದರ್ಭದಲ್ಲಿ ಬಂಗಾರಪೇಟೆಯಲ್ಲಿ ಅವರು ಇರುತ್ತಾರೆ, ಕೋಲಾರದಲ್ಲಿ ನಾವು ಇರುತ್ತೀವಿ ಎಂದರು.

ಕೆಡಿಪಿ ಸಭೆಗೆ ಶಾಸಕರು ಗೈರಾಗಿರುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಎಲ್ಲ ಸಭೆಗೂ ನಾನು ಹಾಜರಾಗಿದ್ದೇನೆ. ಎಸ್​.ಎನ್​.ನಾರಾಯಣಸ್ವಾಮಿ, ರೂಪಾ ಅವರು ಒಂದೆರಡು ಸಭೆಗೆ ಹಾಜರಾಗಿದ್ದಾರೆ. ಅದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಬೇಕಾದರೆ ಮಾನದಂಡಗಳು ಇವೆ. ಶಾಸಕರು, ಪರಾಜಿತ ಅಭ್ಯರ್ಥಿಗಳು, ಮುಖಂಡರ ಅಭಿಪ್ರಾಯ ಕೇಳಬೇಕು. ಅದೆಲ್ಲ ಕೆಪಿಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.