ನ್ಯೂಸ್

ಎಚ್‌ಡಿಕೆ ಬಲದಿಂದ ಜೆಡಿಎಸ್‌ನಲ್ಲಿ ಹೊಸ ಚೈತನ್ಯ

Bengaluru - Political - Shivananda Tagadur

ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವರಾದ ಬಳಿಕ ಜೆಡಿಎಸ್‌ನಲ್ಲಿ ಹೊಸ ಉತ್ಸಾಹ ಕಾರ್ಯಕರ್ತರಲ್ಲಿ ಮೊಳಕೆಯೊಡೆಯುತ್ತಿದೆ.
ಹಾಸನದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಘಟನೆಯಿಂದ ಜರ್ಜರಿತವಾಗಿ ಹೋಗಿದ್ದ ಜೆಡಿಎಸ್‌ನಲ್ಲಿ ಹೊಸ ಚೈತನ್ಯ ಕಾಣುತ್ತಿರುವುದರಿಂದ ಮುಖಂಡರು ಮತ್ತು ಕಾರ್ಯಕರ್ತರು ಎಂದಿನಂತೆಯೇ ಸಕ್ರೀಯವಾಗುತ್ತಿದ್ದಾರೆ.
ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಮತ್ತು ಮಾಜಿ ಸಂಸದರು ಸೇರಿದಂತೆ ಬಹುತೇಕ ಎಲ್ಲಾ ಮುಖಂಡರು ಈಗ ಜೆಡಿಎಸ್ ಪಕ್ಷದಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಜೊತೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಲೋಕಸಭಾ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ಉತ್ತಮ ಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗಿದೆ. ಅದೇ ಹಾದಿಯಲ್ಲಿ ಮುನ್ನೆಡೆದರೆ, ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಮುಂದೆಯೂ ಪ್ರಾಬಲ್ಯ ಉಳಿಸಿಕೊಳ್ಳಲು ಸಾಧ್ಯವಿದೆ ಎನ್ನುವುದು ದಳಪತಿಗಳ ಲೆಕ್ಕಾಚಾರ.
ಬದಲಾದ ರಾಜಕೀಯ ಸನ್ನೀವೇಶದಲ್ಲಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವುದರಿಂದ ಅವರ ಪ್ರಭಾವವನ್ನು ಬಳಸಿಕೊಂಡು ಜಿಲ್ಲಾ ಘಟಕಗಳನ್ನು ಕ್ರೀಯಾಶೀಲಗೊಳಿಸಲು ದಳಪತಿಗಳು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮಾರ್ಗದರ್ಶನವನ್ನು ಪಡೆದುಕೊಂಡಿದ್ದಾರೆ.