ಎಚ್.ಡಿ.ಕೋಟೆ ನೂತನವಾಗಿ ಆಯ್ಕೆ ಆದ ಪುರಸಭಾ ಅಧ್ಯಕ್ಷೆ ಶಿವಮ್ಮ ಚಾಕಹಳ್ಳಿ ಕೃಷ್ಣ ಹಾಗೂ ಉಪಾಧ್ಯಕ್ಷ ಆಸೀಫ್ ಇಕ್ಬಾಲ್ ಅವರನ್ನು ಇತರ ಸದಸ್ಯರು ಅಭಿನಂದಿಸಿದರು. 
ನ್ಯೂಸ್

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಜೆಡಿಎಸ್, ಕಾಂಗ್ರೆಸ್ ಪಾಲು

ಎಚ್.ಡಿ.ಕೋಟೆ: ಕೊನೆಯ ಏಳು ತಿಂಗಳ ಅವಧಿಗೆ ಪುರಸಭಾ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಶಿವಮ್ಮ ಚಾಕಹಳ್ಳಿ ಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಆಸೀಫ್ ಇಕ್ಬಾಲ್ ಆಯ್ಕೆಯಾದರು.

ಪಟ್ಟಣದ ಪುರಸಭಾ ಕಾರ್ಯಲಯದ ಸಭಾಂಗಣದಲ್ಲಿ ಬುಧವಾರ ಚುನಾವಣಾಧಿಕಾರಿ ತಹಸೀಲ್ದಾರ್ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಶಿವಮ್ಮ ಚಾಕಹಳ್ಳಿ ಕೃಷ್ಣ ಅಧ್ಯಕ್ಷೆಯಾಗಿ ಹಾಗೂ ಮೂರು ಮತಗಳ ಅಂತರದಲ್ಲಿ ಆಸೀಫ್ ಇಕ್ಬಾಲ್ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಹರೀಶ್ ಗೌಡ ಮೂರು ಮತಗಳ ಅಂತರದಲ್ಲಿ ಪರಾಭವಗೊಂಡರು.

ಬೆಳಗ್ಗೆ 11 ಗಂಟೆಗೆ ಚುನಾವಣೆ ನಿಗದಿ ಆಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಶಿವಮ್ಮ ಚಾಕಹಳ್ಳಿ ಕೃಷ್ಣ ಒಬ್ಬರೇ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಆಸೀಫ್ ಇಕ್ಬಾಲ್ ಹಾಗೂ ಜೆಡಿಎಸ್ ಪಕ್ಷದ ಹರೀಶ್‌ಗೌಡ ನಾಮಪತ್ರ ಸಲ್ಲಿಸಿದರು.

ಗುಪ್ತ ಮತದಾನ ಮಾಡುವಂತೆ ಜೆಡಿಎಸ್ ಸದಸ್ಯರು ಒತ್ತಾಯಿಸಿದ್ದರು. ಆದರೆ ಕಾಂಗ್ರೆಸ್ ಸದಸ್ಯರು ಕೈ ಎತ್ತುವ ಮೂಲಕ ಮತದಾನ ನಡೆಯಬೇಕು ಎಂದು ಪಟ್ಟು ಹಿಡಿದರು. ನಂತರ ಚುನಾವಣಾ ಅಧಿಕಾರಿಗಳು ಪುರಸಭಾ ಕಾಯ್ದೆ ಪ್ರಕಾರ ಕೈ ಎತ್ತುವ ಮೂಲಕ ಚುನಾವಣೆ ನಡೆಯಲು ಅವಕಾಶ ಇದೆ ಎಂದು ಜೆಡಿಎಸ್ ಪಕ್ಷದ ಸದಸ್ಯರಿಗೆ ಮನವರಿಕೆ ಮಾಡಿದ ನಂತರ ಕೈ ಎತ್ತುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಹಾಗಾಗಿ ಜೆಡಿಎಸ್ ಪಕ್ಷದ ಯಾವುದೇ ಮ್ಯಾಜಿಕ್ ನಡೆಯಲಿಲ್ಲ.

ಪುರಸಭೆಗೆ ಒಟ್ಟು 23 ಜನ ಸದಸ್ಯರು ಆಯ್ಕೆಯಾಗಿದ್ದು, ಕಾಂಗ್ರೆಸ್‌ನ 11 ಜನ ಸದಸ್ಯರು, ಜೆಡಿಎಸ್ ಪಕ್ಷದ 8, ಬಿಜೆಪಿ 1, ಬಿಎಸ್ಪಿ 1 ಹಾಗೂ ಪಕ್ಷೇತರ ಎರಡು ಸದಸ್ಯರು ಇದ್ದು, ಪಕ್ಷೇತರ ಇಬ್ಬರು ಸದಸ್ಯರು ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ, ಬಿಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷದ ಒಬ್ಬರು ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಹರೀಶ್‌ಗೌಡ ಅವರಿಗೆ ಹತ್ತು ಮತಗಳು ಬಂದವು.