ನವದೆಹಲಿ: ಭಾರತದಲ್ಲಿ ಸಾಹಿತ್ಯ ಕೃತಿಗೆ ಅತಿ ಹೆಚ್ಚು ಮೊತ್ತದ ಬಹುಮಾನ ನೀಡಲಾಗುವ 'ಜೆಸಿಬಿ ಪ್ರೈಜ್ ಫಾರ್ ಲಿಟರೇಟರ್' ಪ್ರಶಸ್ತಿಗೆ ತೀರ್ಪುಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಪ್ರಶಸ್ತಿಗೆ ಆಯ್ಕೆಯಾಗುವ ಕೃತಿಗೆ ಬರೋಬ್ಬರಿ 25 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಒಂದು ವೇಳೆ ಆ ಕೃತಿ ಅನುವಾದವಾಗಿದ್ದರೆ, ಭಾಷಾಂತಕಾರರಿಗೆ ಪ್ರತ್ಯೇಕವಾಗಿ 10 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.
ಇನ್ನು ವಿಶೇಷವೆಂದರೆ, ಅಂತಿಮ ಸುತ್ತಿಗೆ ಆಯ್ಕೆಯಾಗುವ ಎಲ್ಲ ಕೃತಿಗಳಿಗೂ ಒಂದು ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಈ ವಿಭಾಗದಲ್ಲೂ ಅನುವಾದಿತ ಕೃತಿಗಳಿದ್ದರೆ ಅವರು ಕೂಡ 50,000 ರೂ.ಗಳನ್ನು ಪಡೆಯುತ್ತಾರೆ.
ಕಳೆದ ಬಾರಿ ಭಾರತೀಯ ಮೂಲದ ಅಮೆರಿಕ ನಿವಾಸಿ ಮಾಧುರಿ ವಿಜಯ್ ಅವರ "ದಿ ಫಾರ್ ಫೀಲ್ಡ್" ಕೃತಿ ಪ್ರಶಸ್ತಿಗೆ ಭಾಜನವಾಗಿತ್ತು.
2020ರ ಸಾಹಿತ್ಯ ಕೃತಿಯ ಆಯ್ಕೆಗೆ ಜೆಸಿಬಿ ಪ್ರತಿಷ್ಠಾನವು ತೀರ್ಪುಗಾರರ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ. ಸಂಗೀತ, ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷೆ ಹಾಗೂ ಭರತನಾಟ್ಯ ಕಲಾವಿದೆ ಲೀಲಾ ಸ್ಯಾಮ್ಸನ್ ಮಂಡಳಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕ ತೇಜಸ್ವಿ ನಿರಂಜನ್, ಟಾಟಾ ಟ್ರಸ್ಟ್ನ ಕಲೆ ಮತ್ತು ಸಂಸ್ಕೃತಿ ವಿಭಾಗದ ಮುಖ್ಯಸ್ಥೆ ದೀಪಿಕಾ ಸೊರಾಬ್ಜಿ, ಲೇಖಕ ಹಾಗೂ ಅನುವಾದಕಿ ಅರುಣಿ ಕಶ್ಯಪ್, ನಿರ್ದೇಶಕ ಹಾಗೂ ಸಂಭಾಷಣೆಕಾರ ರಾಮು ರಾಮನಾಥನ್ ಆಯ್ಕೆ ಮಂಡಳಿಯಲ್ಲಿದ್ದಾರೆ.
ಆಯ್ಕೆ ಮಂಡಳಿಯು ಸೆಪ್ಟಂಬರ್ 1ರಂದು ಕೃತಿಗಳ ಸುಧೀರ್ಘ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಬಳಿಕ ಪ್ರಶಸ್ತಿ ಸುತ್ತಿಗೆ ಐದು ಕೃತಿಗಳನ್ನು ಪರಿಗಣಿಸಲಾಗುತ್ತದೆ. ಆ ಪಟ್ಟಿಯನ್ನು ಸೆಪ್ಟಂಬರ್ 25ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.