ನವದೆಹಲಿ: ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ನೇತೃತ್ವದಲ್ಲಿ ನವದೆಹಲಿಯ ಅಂಬೇಡ್ಕರ್ ಭವನದಲ್ಲಿ ಶನಿವಾರ ಮತ್ತು ಭಾನುವಾರ ಬಂಜಾರ ಸಮುದಾಯದ ಆರಾಧ್ಯದೈವ ಸಂತ ಸೇವಾಲಾಲರ ಜಯಂತ್ಯುತ್ಸವ ಮತ್ತು ಬಂಜಾರ/ತಾಂಡಾಗಳ ವಿಕಾಸ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಬಂಜಾರ ಸಮಾಜದ ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕ ಮೂಲದ ರಾಜಕಾರಣಿಯೊಬ್ಬರು ಮೊದಲ ಬಾರಿಗೆ ದೆಹಲಿಯಲ್ಲಿ ಸೇವಾಲಾಲರ ಜಯಂತಿ ಉತ್ಸವ ನಡೆಸುತ್ತಿದ್ದು, ರಾಜ್ಯದಿಂದಲೂ ಬಂಜಾರ ಸಮುದಾಯದ ನೂರಾರು ಜನರನ್ನು ಕರೆ ತರಲಾಗಿದೆ.
ಕೇಂದ್ರ ಸಮಾಜ ಕಲ್ಯಾಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾಜದ ಧಾರ್ವಿುಕ ಗುರುಗಳಾದ ರಾಮರಾವ್ ಮಹಾರಾಜ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್, ಅಖಿಲ ಭಾರತ ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಂಕರ್ ಪವಾರ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಜಾಧವ್ ಮಾಹಿತಿ ನೀಡಿದ್ದಾರೆ.