ನ್ಯೂಸ್

ಸಂಭ್ರಮ, ಸಡಗರದಿಂದ ಜೀವೇಶ್ವರ ಜಯಂತಿ ಆಚರಣೆ

ರಾಣೆಬೆನ್ನೂರ: ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಮಂಗಳವಾರ ಸ್ವಕುಳ ಸಾಳಿ ಸಮಾಜದ ಭಗವಾನ್ ಶ್ರೀ ಜೀವೇಶ್ವರ ಸ್ವಾಮಿ ಜಯಂತಿ ಉತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
ದೇವಸ್ಥಾನದಲ್ಲಿ ಬೆಳಗ್ಗೆ ಅಭಿಷೇಕ, ಕಾಕಡಾರತಿ, ಪೂಜೆ ನಡೆಯಿತು. ನಂತರ ಜೀವೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಮರಳಿತು. ಪಾಲಕಿ ಉತ್ಸವದಲ್ಲಿ ದಾರಿಯುದ್ದಕ್ಕೂ ಮಹಿಳೆಯರು ಭಜನೆಯೊಂದಿಗೆ ನೃತ್ಯ ಮಾಡುತ್ತ ಸಾಗಿದರು.
ಪಲ್ಲಕ್ಕಿದ ಬಳಿಕ ಸ್ವಾಮಿಗೆ ತೊಟ್ಟಿಲು ಉತ್ಸವ, ಮಹಿಳೆಯರಿಗೆ ಉಡಿ ತುಂಬುವುದು ಸೇರಿ ವಿವಿಧ ಕಾರ್ಯಕ್ರಮ ಜರುಗಿದವು. ಉತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿ.ಯು.ಸಿ. ಹಾಗೂ ಪದವಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಮಾಜದ ಅಧ್ಯಕ್ಷ ಖಂಡಪ್ಪ ರೋಖಡೆ, ತಾರಾಬಾಯಿ ಕ್ಷೀರಸಾಗರ, ಭಾರತಿ ಏಕಬೋಟೆ, ವಿಠ್ಠಲರಾವ ಏಕಬೋಟೆ, ಶ್ರೀಕಾಂತ ಕ್ಷೀರಸಾಗರ, ರಾಮಕೃಷ್ಣ ತಾಂಬೆ, ನಾರಾಯಣಪ್ಪ ಪಾಣಿಭಾತೆ, ವೆಂಕಟೇಶ ಏಕಬೋಟೆ, ವಿಠ್ಠಲ ಏಡಕೆ, ದೇವೆಂದ್ರಪ್ಪ ರೋಖಡೆ, ನಾಮದೇವ ಜಿಂದೆ, ಹರೀಶ ದಿವಟೆ ಮತ್ತಿತರರು ಪಾಲ್ಗೊಂಡಿದ್ದರು.