ನ್ಯೂಸ್

ರಾಜ್ಯದಲ್ಲೇ ಜಯನಗರ ‘ಶ್ರೀಮಂತ ಬಡಾವಣೆ’

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಅತೀ ಶ್ರೀಮಂತ ಬಡಾವಣೆ ಎಂಬ ಖ್ಯಾತಿಗೆ ‘ಜಯನಗರ’ ಒಳಗಾಗಿದೆ. ರಾಜ್ಯದಲ್ಲಿನ ಆಸ್ತಿ ಮಾರ್ಗಸೂಚಿ ದರವನ್ನು ಐದು ವರ್ಷಗಳ ಬಳಿಕ ಪರಿಷ್ಕರಣೆ ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಾರಿಗೆ ತಂದಿದೆ. ಇದರ ಪ್ರಕಾರ ಮೈಸೂರು ಸಂಸ್ಥಾನದ ಇತಿಹಾಸ ಹೊಂದಿರುವ ‘ಜಯನಗರ’ದಲ್ಲಿ ಆಸ್ತಿಯ ಮೌಲ್ಯ ಇಡೀ ರಾಜ್ಯದಲ್ಲಿಯೇ ಅತೀ ಅಧಿಕವಾಗಿದೆ.

ಜಯನಗರ 3ನೇ ಹಂತ ಕಾಸ್ಮೋಪಾಲಿಟನ್ ಕ್ಲಬ್ ವೃತ್ತದಿಂದ 11ನೇ ಮುಖ್ಯರಸ್ತೆಯಲ್ಲಿ ವಾಣಿಜ್ಯ ಉದ್ದೇಶಿತ ಸೈಟಿನ ದರ ಪ್ರತಿ ಚದರ ಮೀಟರ್‌ಗೆ 5.36 ಲಕ್ಷ ರೂ., ಜಯನಗರ 4ನೇ ಹಂತ 30ನೇ ಅಡ್ಡರಸ್ತೆ (4ನೇ ಮುಖ್ಯರಸ್ತೆಯಿಂದ ದಯಾನಂದ ಕಾಲೇಜುವರೆಗೆ) ವಾಣಿಜ್ಯ ಉದ್ದೇಶಿತ ಸೈಟಿನ ಬೆಲೆ ಚದರ ಮೀಟರ್‌ಗೆ 5.03 ಲಕ್ಷ ರೂ., 27ನೇ ಅಡ್ಡರಸ್ತೆ ವಾಣಿಜ್ಯ ಉದ್ದೇಶಿತ ಸೈಟ್ ಚದರ ಮೀಟರ್‌ಗೆ 5,03,500 ರೂ. ಹಾಗೂ ಜಯನಗರ 5ನೇ ಹಂತ 40ನೇ ಅಡ್ಡ ರಸ್ತೆ ವಾಣಿಜ್ಯ ಉದ್ದೇಶಿತ ಸೈಟ್‌ನ ಪ್ರತಿ ಚದರ ಮೀಟರ್‌ಗೆ 4.39 ಲಕ್ಷ ರೂ. ಮಾರ್ಗಸೂಚಿ ದರ ನಿಗದಿಯಾಗಿದೆ.

ಇದನ್ನು ಹೊರತಾಗಿಯೂ ಮಾರುಕಟ್ಟೆ ಮೌಲ್ಯ ಸಾಮಾನ್ಯವಾಗಿ ಶೇ.30ಕ್ಕೂ ಅಧಿಕ ಇರಲಿದೆ. ಮಾರ್ಗಸೂಚಿ ದರದಲ್ಲಿ 30*40 ಸೈಟಿಗೆ ಅಂದಾಜು 6 ಕೋಟಿ ರೂ. ಆದರೆ ಮಾರುಕಟ್ಟೆ ದರ 10 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.

ರಾಜ್ಯದಲ್ಲಿಯೇ ಜಯನಗರದಲ್ಲಿ ಸೈಟಿನ ಬೆಲೆ ಅತೀ ಹೆಚ್ಚು ಇರುವುದಕ್ಕೆ ಹಲವು ಕಾರಣಗಳಿವೆ. ಮೈಸೂರು ಸಂಸ್ಥಾನ ಸಮಯದಲ್ಲಿಯೇ ಸುಸಜ್ಜಿತವಾಗಿ ಜಯನಗರ ಬಡಾವಣೆ ನಿರ್ಮಿಸಲಾಗಿದೆ. ವಿಶಾಲವಾದ ರಸ್ತೆಗಳು, ಪಾರ್ಕ್, ಆಸ್ಪತ್ರೆ, ಗ್ರಂಥಾಲಯ ಮತ್ತು ಹಸಿರುನಿಂದ ಕೂಡಿದೆ. ಇಲ್ಲಿ ಅತೀ ಶ್ರೀಮಂತರು ನೆಲೆಸಿದ್ದಾರೆ. ವಾಣಿಜ್ಯ ಉದ್ದೇಶಿತ ಸೈಟ್‌ಗಳಲ್ಲಿ ದೊಡ್ಡ ದೊಡ್ಡ ಬ್ರಾಂಡೆಡ್ ಕಂಪನಿಗಳು ಮಳಿಗೆಗಳನ್ನು ತೆರೆದಿವೆ. ಆದರಿಂದ ಇಲ್ಲಿನ ಆಸ್ತಿ ಮೌಲ್ಯ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ.

ಜಯನಗರದ ಹೊರತು ಪಡಿಸಿದರೇ ಅತೀ ಹೆಚ್ಚು ಅಂದರೇ ಓಟಿಸಿ ರಸ್ತೆ (ಬಿಬಿಎಂಪಿ ಕಚೇರಿ ಕುಂಬಾರಗುಡಿ ರಸ್ತೆ) ಅಲ್ಲಿ ಪ್ರತಿ ಚದರ ಮೀಟರ್‌ಗೆ 4,13,400 ರೂಪಾಯಿ ನಿಗದಿಯಾಗಿದೆ. ಇನ್ನೂ ರಾಜಧಾನಿ ಎಂದ ಕೂಡಲೇ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಲ್ಯಾವೆಲ್ಲಿ ರಸ್ತೆ ಹಾಗೂ ಸದಾಶಿವನಗರದಲ್ಲಿ ಆಸ್ತಿಯ ಮೌಲ್ಯ ಅಧಿಕವಾಗಿರುತ್ತದೆ ಎಂದು ಅಂದಾಜು ಮಾಡುತ್ತಾರೆ. ಆದರೆ, ಸರ್ಕಾರದ ಮಾರ್ಗಸೂಚಿ ದರದ ಪ್ರಕಾರ ಎಂ.ಜಿ ರಸ್ತೆ (ಕಸ್ತೂರಿ ಬಾ ರಸ್ತೆಯಿಂದ ಟ್ರಿನಿಟಿ ಸರ್ಕಲ್) ವರೆಗೂ ಪ್ರತಿ ಚದರ ಮೀಟರ್‌ಗೆ 3.15 ಲಕ್ಷ ರೂ., ಲ್ಯಾವೆಲ್ಲಿ ರಸ್ತೆ 2,39,500 ರೂ. ಮತ್ತು ಬ್ರಿಗೇಡ್ ರಸ್ತೆ (ರೆಸಿಡೆನ್ಸಿ ರಸ್ತೆಯಿಂದ ರಿಚ್‌ಮಂಡ್ ರಸ್ತೆವರೆಗೆ) 2,15,500 ರೂಪಾಯಿ. ಈ ಪ್ರದೇಶದಲ್ಲಿ ಅತೀ ಹೆಚ್ಚು ವಾಣಿಜ್ಯ ಮಳಿಗೆಗಳು ಕಾಣಬಹುದಾಗಿದೆ. ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ನೆಲೆಸಿರುವ ಸದಾಶಿವನಗರ ಸ್ಯಾಂಕಿ ರಸ್ತೆ (ಕಾವೇರಿ ಚಿತ್ರಮಂದಿರದಿಂದ ಬಾಷ್ಯಂ ಸರ್ಕಲ್) ಚದರ ಮೀಟರ್‌ಗೆ 3.02 ಲಕ್ಷ ರೂ.ಅನ್ನು ನಿಗದಿ ಮಾಡಿರುವುದು ಕಂದಾಯ ಇಲಾಖೆ ದಾಖಲೆಯಲ್ಲಿ ಉಲ್ಲೇಖವಾಗಿದೆ.

ವರ್ತುಲ ರಸ್ತೆಗಳಲ್ಲಿ ಭೂಮಿಗೆ ಚಿನ್ನದ ಬೆಲೆ :

ಅತೀ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಬೆಂಗಳೂರು ಕನಸುಕಂಡಿರುವ ನಗರದ ಒಳ-ಹೊರ ವರ್ತುಲ ರಸ್ತೆಗಳ ಆಸುಪಾಸುಗಳಲ್ಲಿ ಭೂಮಿಯ ಬೆಲೆ ಚಿನ್ನವಾಗಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲೂ ಅಧಿಕವಾಗಿದೆ.

ಹೆಬ್ಬಾಳದಲ್ಲಿ ಪ್ರತಿ ಎಕರೆಗೆ 14.52 ಕೋಟಿ ರೂ. ನಿಗದಿ ಮಾಡಲಾಗಿದೆ. ಹೆಬ್ಬಾಳ ಹೊರವರ್ತುಲ ರಸ್ತೆ ಅಕ್ಕಪಕ್ಕದ 1 ಎಕರೆಗೆ 15.60 ಕೋಟಿ ರೂ., ನಾಗವಾರ ಹೊರವರ್ತುಲ ರಸ್ತೆ 1 ಎಕರೆ 15 ಕೋಟಿ ರೂ. ಮತ್ತು ದೊಡ್ಡನೆಕ್ಕುಂದಿ ರಿಂಗ್ ರಸ್ತೆ ಪಕ್ಕದಲ್ಲಿ 1 ಎಕರೆಗೆ 13 ಕೋಟಿ ರೂ.ಅನ್ನು ಸರ್ಕಾರ ನಿಗದಿ ಮಾಡಿದೆ.

ಮೈಸೂರು ಸಂಸ್ಥಾನದ ನೆನಪು:

1940ರಲ್ಲಿ ಮೈಸೂರು ಸಂಸ್ಥಾನಕ್ಕೆ ಮಹಾರಾಜರಾಗಿ ಜಯಚಾಮರಾಜೇಂದ್ರ ಒಡೆಯರ್ ಪಟ್ಟಕ್ಕೆ ಏರುತ್ತಾರೆ. 8 ವರ್ಷ ಪೂರೈಸಿದ ಸವಿನೆನಪಿಗಾಗಿ 1948ರಲ್ಲಿ ಸುಸಜ್ಜಿತ ಜಯನಗರ ಬಡಾವಣೆಗೆ

ಅಡಿಗಲ್ಲು ಹಾಕಲಾಯಿತು. ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಇಟಿಬಿ) ಪ್ರಾಧಿಕಾರ ಸ್ಥಾಪಿಸಿ ಅಧ್ಯಕ್ಷರಾಗಿ ಸಿ. ನರಸಿಂಗ ರಾವ್ ಮತ್ತು ಮುಖ್ಯ ಇಂಜಿನಿಯರ್‌ಯಾಗಿ ಆರ್.ಮಾಧವನ್ ನೇಮಕ ಮಾಡಲಾಗಿತ್ತು.

ಅಧಿಕ ಆಸ್ತಿ ಮೌಲ್ಯ ಇರುವ ಪ್ರದೇಶಗಳು(ಚದರ ಮೀಟರ್)

*ಕೋರಮಂಗಲ ರಸ್ತೆ 1,06,600 ರೂ. *ಮಾರೇನಹಳ್ಳಿ 100 ಅಡಿ ರಸ್ತೆ ವಾಣಿಜ್ಯ ಸೈಟ್ 3,65,900 ರೂ. *ಮಲ್ಲೇಶ್ವರ 5ರಿಂದ 12ನೇ ಮುಖ್ಯರಸ್ತೆ ವರೆಗೆ 1,95,000 ರೂ. *ಅವೆನ್ಯೂ ಮುಖ್ಯ ರಸ್ತೆ 2,69,125 ರೂ. *ಕೆಂಪೇಗೌಡ ರಸ್ತೆ 3,36,375 ರೂ. *ಗಾಂಧಿನಗರದಲ್ಲಿ 2 ಲಕ್ಷ ರೂ. *ಕನ್ನಿಂಗ್‌ಹ್ಯಾಂ ರಸ್ತೆ 3,62,180 ರೂ. *ಚರ್ಚ್ ರಸ್ತೆ 2,30,000 ರೂ. *ಕಮರ್ಷಿಯಲ್ ಸ್ಟ್ರೀಟ್ 3,19,000 ರೂ. *ಕನ್ನಿಂಗ್‌ಹ್ಯಾಂ ರಸ್ತೆ ಎಸ್‌ಆರ್‌ಟಿ 3,22,000 ರೂ. *ಎಂಜಿ ರಸ್ತೆಯಿಂದ ಹಲಸೂರು ವರೆಗೆ ಡಿಕೆನ್ಸನ್ ರಸ್ತೆ 1,81,500 ರೂ.

ನಗರದ ವರ್ತುಲ ರಸ್ತೆಗಳ ಆಸುಪಾಸು ಭೂಮಿ ಮೌಲ್ಯ (1 ಎಕರೆಗೆ)

*ಮಹದೇವಪುರ ಹೊರವರ್ತುಲ ರಸ್ತೆ 12 ಕೋಟಿ ರೂ.

*ವೈಟ್‌ಫೀಲ್ಡ್ ಮುಖ್ಯ ರಸ್ತೆ 11 ಕೋಟಿ ರೂ.

*ಬೆಳ್ಳಂದೂರು ಹೊರವರ್ತುಲ ರಸ್ತೆ 9.95 ಕೋಟಿ ರೂ.

*ಬಿ. ನಾರಾಯಣಪುರ ಹೊರವರ್ತುಲ ರಸ್ತೆ 9.51 ಕೋಟಿ ರೂ.

*ವರ್ತೂರು ಮತ್ತು ವೈಟ್‌ಫೀಲ್ಡ್ ಮುಖ್ಯರಸ್ತೆ 8.30 ಕೋಟಿ ರೂ.

*ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 4ರಿಂದ 8 ಕೋಟಿ ರೂ.

*ೇರಿಪರ್ ರಿಂಗ್ ರಸ್ತೆ 5.08 ಕೋಟಿ ರೂ.

*ಕನಕಪುರ ಮುಖ್ಯರಸ್ತೆಯಲ್ಲಿ 8.88 ಕೋಟಿ ರೂ.

*ಇಬ್ಬಲೂರು ಹೊರವರ್ತುಲ ರಸ್ತೆ 8.73 ಕೋಟಿ ರೂ.

*ರಾಷ್ಟ್ರೀಯ ಹೆದ್ದಾರಿ-7 (ಬಳ್ಳಾರಿ ರಸ್ತೆ) 6.30 ಕೋಟಿ ರೂ.

*ಮಾಗಡಿ ರಸ್ತೆ 6 ಕೋಟಿ ರೂ.