ಮೈಸೂರು: ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದನ್ನು ಖಂಡಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರು ವಿಧಾನಸೌಧಕ್ಕೆ ಆ.15ರಿಂದ 20ರವರೆಗೆ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಆರ್. ಮೋಹನರಾಜು ತಿಳಿಸಿದರು.
ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡಗಳ ಉಪಯೋಜನೆ ಹಣದ ಮೂಲ ಉದ್ದೇಶವನ್ನು ರಾಜ್ಯ ಸರ್ಕಾರ ಮರೆತಿದೆ. 7ಡಿ, 7ಸಿ ಯ ಹೆಸರಿನಲ್ಲಿ ಪ.ಜಾ, ಪ.ಪಂ ಸಮುದಾಯಗಳಿಗೆ ಕಾಯ್ದೆ ತಂದವರಿಂದಲೇ ಕಾಯ್ದೆಯ ಉಲ್ಲಂಘನೆ ಆಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ವಂಚನೆ ಖಂಡಿಸಿ, ಸಮಾಜ ಕಲ್ಯಾಣ ಸಚಿವರು ರಾಜೀನಾಮೆ ಸಲ್ಲಿಸಬೇಕು. ಮುಡಾ ಹಗರಣ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಾವಿರಾರು ವರ್ಷಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನವನ್ನು 2013ರಲ್ಲಿ ರಾಜ್ಯ ಸರ್ಕಾರ ನಿಗದಿಪಡಿಸಿದ್ದು, ಈ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಬಾರದು ಎಂದು ಕಾಯ್ದೆಯಲ್ಲಿ ಇದ್ದ 7ಡಿ ಕಲಂನ್ನು ರದ್ದು ಪಡಿಸಿದ್ದು ಸರಿಯಷ್ಟೆ. ಆದರೂ ಸಹ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಈ ಸಮುದಾಯಗಳಿಗೆ ಮಾಡುತ್ತಿರುವ ವಂಚನೆ ಎಂದರು.
ಒಂದು ವರ್ಷದಲ್ಲಿ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡಿರುವುದು ಕಾಯ್ದೆಗೆ ವಿರುದ್ಧವಾದುದು. ಕಾಯ್ದೆ ಜಾರಿಗೆ ಬಂದಾಗಿನಿಂದ ಸುಮಾರು 70 ಸಾವಿರ ಕೋಟಿ ಹಣವನ್ನು ಕಾಯ್ದೆಗೆ ವಿರುದ್ಧವಾಗಿ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿರುವುದು ಈ ಸಮುದಾಯಗಳಿಗೆ ಮಾಡಿರುವ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.
ಈ ಎಲ್ಲಾ ಅನ್ಯಾಯಗಳ ಜತೆಗೆ ಮುಡಾ ಹಗರಣದಲ್ಲಿ ದಿಕ್ಕು ಅತಪ್ಪಿಸುವ ಕೆಲಸ ಮಾಡುತ್ತಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಜತೆಗೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಿ ಮೋಸ ಮಾಡಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಆ.15 ರಂದು ಬೇಳಗ್ಗೆ 11.30 ಕ್ಕೆ ಮೈಸೂರಿನ ಜಿಲ್ಲಾ ಅಧಿಕಾರಿ ಕಚೇರಿಯಿಂದ ಬೆಂಗಳೂರಿಗೆ ವಿವಿಧ ಸಂಘಟನೆಗಳೊಂದಿಗೆ ಸೇರಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಆರ್‌ಪಿಐ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಕೆ. ಬಿ ರಾಜು, ಕೆ. ಎಂ ಶ್ರೀನಿವಾಸ್, ದಸಂಸ ಜಿಲ್ಲಾ ಸಂಚಾಲಕ ರಾಜಶೇಖರ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ರಮೇಶ್ ಹಾಜರಿದ್ದರು.