ಹನೂರು: ತಾಲೂಕಿನ ಕುರಟ್ಟಿ ಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗಡಿನಾಡು ಕನ್ನಡ ನುಡಿಸಿರಿಯ ಬಗ್ಗೆ ಗ್ರಾಮದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.
ಕನ್ನಡ ನಾಡಿನ ಹಿರಿಮೆಯನ್ನು ಸಾರುವಂತಹ ವಿವಿಧ ವೇಷಭೂಷಣಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಶಿಕ್ಷಕರ ಜತೆಗೂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಚರಿಸುವುದರ ಜತೆಗೆ ಶೆಟ್ಟಳ್ಳಿ ಗ್ರಾಮದವರೆಗೆ ಮೆರವಣಿಗೆ ನಡೆಸಿ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಹೆಣ್ಣು ಮಕ್ಕಳು ಕುಂಭ ಕಳಸ ಹೊತ್ತು ಎಲ್ಲರ ಗಮನ ಸೆಳೆದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಿ. ಶಿವಶಂಕರ ನಾಯಕ ಮಾತನಾಡಿ, ಕನ್ನಡ ಭಾಷೆಯು ಪ್ರೌಢಿಮೆಯನ್ನು ಹೊಂದಿದ್ದು, 2 ಸಾವಿರ ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಇತರ ಭಾಷೆಗಳಿಗೆ ಹೋಲಿಸಿದರೆ ಭಾಷೆಯು ಉತ್ಕೃಷ್ಟತೆಯನ್ನು ಪಡೆದಿದ್ದು, ಹೆಗ್ಗಳಿಕೆಯನ್ನು ಗಳಿಸಿದೆ. ಹಾಗಾಗಿ ಸಂಸ್ಕೃತಿ, ನೆಲ, ಜಲ ಹಾಗೂ ಭಾಷೆಯನ್ನು ರಕ್ಷಿಸುವುದರ ಜತೆಗೆ ಕನ್ನಡತನವನ್ನು ಉಳಿಸಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನವನ್ನು ಹೊಂದಬೇಕು. ಭಾಷೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 125 ಕ್ಕೆ 124 ಅಂಕವನ್ನು ಪಡೆದ ಶಾಲೆಯ ವಿದ್ಯಾರ್ಥಿಗಳಾದ ಮೀನಾ ಮತ್ತು ಮನು ಅವರನ್ನು ಸನ್ಮಾನಿಸಿಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಟರಾಜು, ಶಿಕ್ಷಕರಾದ ಶಾಂತಿ, ಮಹೇಶ್, ಬಂಗಾರು, ಮನೋಜ್ ಹಾಗೂ ಇನ್ನಿತರರು ಇದ್ದರು.