20ನೇ ಏಷ್ಯನ್​ ಗೇಮ್ಸ್​ನಲ್ಲಿ ಮೊದಲ ಚಿನ್ನದ ಪದಕ ಒಲಿಸಿಕೊಂಡ ಆತಿಥೇಯ ಜಪಾನ್​ 
ನ್ಯೂಸ್

20ನೇ ಏಷ್ಯನ್​ ಗೇಮ್ಸ್​ನಲ್ಲಿ ಮೊದಲ ಚಿನ್ನದ ಪದಕ ಒಲಿಸಿಕೊಂಡ ಆತಿಥೇಯ ಜಪಾನ್​

ಐಚಿ-ನಗೋಯಾ: ಏಷ್ಯನ್​ ಗೇಮ್ಸ್ (Asian Games)​ 20ನೇ ಆವೃತ್ತಿಯ ಮೊದಲ ಚಿನ್ನದ ಪದಕವನ್ನು ಆತಿಥೇಯ ಜಪಾನ್​ ತಂಡವೇ ಗೆದ್ದುಕೊಂಡಿದೆ. ಪುರುಷರ ಟ್ರಯಾಥ್ಲಾನ್​ನಲ್ಲಿ ಜಪಾನ್​ನ ಟಕುಮಿ ಹೊಜೊ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 750 ಮೀ. ಈಜು, 20 ಕಿ.ಮೀ. ಬೈಕ್​ ರೈಡ್​ ಮತ್ತು 5 ಸಾವಿರ ಮೀ. ಓಟದ ಸ್ಪರ್ಧೆಯನ್ನು 30 ವರ್ಷದ ಹೊಜೊ 52 ನಿಮಿಷ, 56 ಸೆಕೆಂಡ್​ಗಳಲ್ಲಿ ಮುಗಿಸಿ ಈ ಸಾಧನೆ ಮಾಡಿದರು ಮತ್ತು 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ಗೂ ಅರ್ಹತೆ ಗಳಿಸಿದರು. ಚೀನಾದ ಝಂಗ್​ ಕ್ಸಿರುಯಿ ಬೆಳ್ಳಿ ಮತ್ತು ಕಜಾಕ್​ಸ್ತಾನದ ಅರ್ಲಾನ್​ ಝನಬೇ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಬ್ಯಾಡ್ಮಿಂಟನ್​ನಲ್ಲಿ ಭಾರತ 8ರ ಘಟ್ಟಕ್ಕೆ ಪ್ರವೇಶ
ಬ್ಯಾಡ್ಮಿಂಟನ್​ ತಂಡ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಭಾರತ ತಂಡ ಕ್ವಾರ್ಟರ್​ಫೈನಲ್​ಗೇರಿದ್ದು, ಉಪಾಂತ್ಯಕ್ಕೇರಲು ಆತಿಥೇಯ ಜಪಾನ್​ ವಿರುದ್ಧ ಸೆಣಸಾಡಲಿದೆ. ಪಿವಿ ಸಿಂಧು ಸಾರಥ್ಯದ ಭಾರತ ತಂಡ ಭಾನುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಕಜಾಕ್​ಸ್ತಾನ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿತು. ವಿಶ್ವ ನಂ. 11 ಪಿವಿ ಸಿಂಧು, ಉನ್ನತಿ ಹೂಡಾ ಮತ್ತು ತನ್ವಿ ಶರ್ಮ ಮೊದಲ 3 ಸಿಂಗಲ್ಸ್​ ಪಂದ್ಯಗಳಲ್ಲೂ ಗೆಲುವು ಸಾಧಿಸಿದರು.
ಸಿಂಗಾಪುರಕ್ಕೆ ಶಾಕ್​ ನೀಡಿದ ಟಿಟಿ ಟೀಮ್​
ಭಾರತದ ಮಹಿಳೆಯರ ತಂಡ ಟೇಬಲ್​ ಟೆನಿಸ್​ ಸ್ಪರ್ಧೆಯಲ್ಲಿ ಬಲಿಷ್ಠ ಸಿಂಗಾಪುರ ತಂಡಕ್ಕೆ 3-2ರಿಂದ ಆಘಾತಕಾರಿ ಸೋಲುಣಿಸಿದೆ. ಎಫ್​ ಗುಂಪಿನಲ್ಲಿ ಕನ್ನಡತಿ ಯಶಸ್ವಿನಿ ಘೋರ್ಪಡೆ ಒಳಗೊಂಡ ಭಾರತ ತಂಡ ದಿನದ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 3-0ರಿಂದ ಜಯಿಸಿತು. ಬಳಿಕ ಸಿಂಗಾಪುರ ವಿರುದ್ಧ ಭಾರತ ಒಂದು ಹಂತದಲ್ಲಿ 1-2ರಿಂದ ಹಿನ್ನಡೆಯಲ್ಲಿತ್ತು. ಬಳಿಕ ದಿವ್ಯಾ ಚಿತಾಲೆ 4ನೇ ಪಂದ್ಯ ಗೆದ್ದು ಆಸೆ ಜೀವಂತವಿಟ್ಟರೆ, ಯಶಸ್ವಿನಿ ನಿರ್ಣಾಯಕ ಪಂದ್ಯ ಜಯಿಸಿದರು. ಪುರುಷರ ವಿಭಾಗದಲ್ಲಿ ಭಾರತ ತಂಡ ಇಂಡೋನೇಷ್ಯಾ ವಿರುದ್ಧ 3-0ಯಿಂದ ಗೆದ್ದರೆ, ಇರಾನ್​ ಎದುರು 0-3ರಿಂದ ಪರಾಭವಗೊಂಡಿತು.