ನ್ಯೂಸ್

ಅಪ್ಪನಿಗಾಗಿ ಬೀದಿ ಬೀದಿಯಲ್ಲಿ ಹುಡುಕಾಟ! ಕಡೆಗೂ 19 ವರ್ಷಗಳ ಬಳಿಕ ತಂದೆ ಮುಖ ನೋಡಿದ ಪುತ್ರ

ಪಂಜಾಬ್​:  2002ರಲ್ಲಿ ಸುಖ್​ಪಾಲ್ ಸಿಂಗ್ ಎಂಬ ವ್ಯಕ್ತಿ ಜಪಾನ್ ಮೂಲದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಥೈಲಾಂಡ್​ನಲ್ಲಿ ಆಕೆಯನ್ನು ಮೊದಲ ಬಾರಿಗೆ ಭೇಟಿಯಾದ ಸಿಂಗ್, ಹೆಚ್ಚು ಸಮಯ ವ್ಯರ್ಥ ಮಾಡದೆ ತನ್ನ ಪ್ರೇಯಸಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲವೂ ಅಂದುಕೊಂಡಂತೆ ನಡೆಯದ ಹಿನ್ನಲೆ ಸುಖ್​ಪಾಲ್​ ಮತ್ತು ಅವರ ಪತ್ನಿ ಒಪ್ಪಂದದ ಮೇರೆಗೆ ಪರಸ್ಪರ ದೂರವಾದರು. ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ 2 ವರ್ಷದ ಮಗ ತನ್ನ ಹೆತ್ತವರಿಂದ ಅನಾಥನಾಗಿ, ಎಲ್ಲೋ ದೂರದಲ್ಲಿ ಬೆಳೆದು ಇಂದು 19 ವರ್ಷಗಳ ನಂತರ ತನ್ನ ತಂದೆಯನ್ನು ಸೇರಿದ್ದು ಇದೀಗ ನೋಡುಗರ ಕಣ್ಣನ್ನು ಒದ್ದೆ ಮಾಡಿದೆ.

ಮಗ ಮತ್ತು ಪತ್ನಿ ಜತೆ ಸಂಪರ್ಕ ಕಳೆದುಕೊಂಡ ಸುಖ್​ಪಾಲ್​ ಪಂಜಾಬ್​ನ ಅಮೃತ್​ಸರದಲ್ಲಿ ಉಳಿದುಕೊಂಡರು. ಅಂದಿನಿಂದ ಒಂದು ದಿನ ಕೂಡ ಮಗನನ್ನು ತಂದೆ ಕಾಣಲಿಲ್ಲ, ಪುತ್ರ ಅಪ್ಪನನ್ನು ನೋಡಲಿಲ್ಲ. ಜಪಾನ್​ನ​ ಟೋಕಿಯೋದಲ್ಲಿ ಜನಿಸಿದ ರಿನ್ ಟಕಾಹಟಾ, ಜನ್ಮ ಕೊಟ್ಟ ತಂದೆಯ ಮುಖ ನೋಡದೆ ಅವರ ಅನುಪಸ್ಥಿತಿಯಲ್ಲೇ ಬೆಳೆದರು. ಬೆಳೆದು ದೊಡ್ಡವನಾದ ರಿನ್,​ ಈಗಲಾದರೂ ನನ್ನಪ್ಪನ ಮುಖ ನೋಡುವ ಸಮಯ ಬಂದಿದೆ ಎಂದು ದೃಢವಾಗಿ ನಿರ್ಧರಿಸಿ ಭಾರತಕ್ಕೆ ಪ್ರಯಾಣಿಸಿದ್ದು, ಕಡೆಗೂ 19 ವರ್ಷಗಳ ನಂತರ ತಂದೆ ಸುಖ್​ಪಾಲ್​ರನ್ನು ಭೇಟಿಯಾಗಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಅಪ್ಪ-ಮಗನ ಭಾವುಕ ಅಪ್ಪುಗೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೋಡುಗರ ಹೃದಯಸ್ಪರ್ಶಿಸಿದೆ. ಮಗನನ್ನು ಅಪ್ಪಿ, ಮುದ್ದಾಡಿದ ತಂದೆ ಸುಖ್​ಪಾಲ್​, ನನ್ನನ್ನು ನೋಡುವ ಸಲುವಾಗಿ ನನ್ನ ಪುತ್ರ ಅಷ್ಟು ದೂರದಿಂದ ಬಂದಿದ್ದಾನೆ. ನನ್ನು ಫೋಟೋ ಹಿಡಿದು ಜನರ ಬಳಿ ಕೇಳುತ, ನಿರಂತರವಾಗಿ ಹುಡುಕುತ ಕಡೆಗೂ ನನ್ನ ಸೇರಿದ್ದಾನೆ. ಇದು ನಿಜಕ್ಕೂ ಕನಸೋ ಅಥವಾ ನನಸೋ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).