ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆಯವರು ಆಗಸ್ಟ್ 28ರಂದು ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ. ಸುದೀರ್ಘ ಚಿಕಿತ್ಸೆ ಅಗತ್ಯ ಇರುವ ಕಾರಣಕ್ಕೆ ಪ್ರಧಾನಿ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಆಗಸ್ಟ್ 28ರಂದು ಶಿಂಜೋ ಅಬೆ ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಜಗತ್ತಿನ ಹಲವು ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಹಾಗೇ ಶೀಘ್ರವೇ ಗುಣಮುಖರಾಗಿ ಎಂದು ಹಾರೈಸಿದ್ದರು. ಅದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ಟ್ವೀಟ್ ಮಾಡಿ, ಆತ್ಮೀಯ ಸ್ನೇಹಿತ ಶಿಂಜೋ ಅಬೆ ಅವರ ಅನಾರೋಗ್ಯದ ಬಗ್ಗೆ ಕೇಳಲು ನೋವಾಗುತ್ತದೆ. ಅವರ ಬುದ್ಧಿವಂತಿಕೆ, ವೈಯಕ್ತಿಕ ಬದ್ಧತೆಗಳಿಂದ ಭಾರತ-ಜಪಾನ್ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿತ್ತು ಎಂದು ಹೇಳಿದ್ದರು. ಹಾಗೇ ಅವರೊಂದಿಗೆ ಇದ್ದ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು.
ಇದೀಗ ಶಿಂಜೋ ಅವರು ಸೆಪ್ಟೆಂಬರ್ 11ರಂದು ಪ್ರಧಾನಿ ಮೋದಿಯವರೊಂದಿಗೆ ತಾವು ಇರುವ ನಾಲ್ಕು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಸೆಲ್ಫಿಯನ್ನೂ ಪೋಸ್ಟ್ ಮಾಡಿದ್ದಾರೆ. ಜಪಾನ್ ಭಾರತದೊಂದಿಗೆ ಸ್ವಾಧೀನ ಮತ್ತು ಕ್ರಾಸ್ ಸರ್ವೀಸಿಂಗ್ (ಎಸಿಎಸ್ಎ) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಿಂದ ನಮ್ಮ ರಕ್ಷಣಾ ಪಡೆ ಮತ್ತು ಭಾರತೀಯ ಸೇನಾಪಡೆಗಳ ನಡುವಿನ ಸಹಕಾರ ಉತ್ತೇಜನಗೊಳ್ಳಲಿದೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡಲು ಭಾರತ ಮತ್ತು ಜಪಾನ್ಗಳಿಗೆ ಮೂಲಾಧಾರವಾಗಲಿದೆ ಎಂದು ಶಿಂಜೋ ಟ್ವೀಟ್ ಮಾಡಿದ್ದಾರೆ.
ಶಿಂಜೋ ಅವರು ಪೋಸ್ಟ್ ಮಾಡಿರುವ ತಮ್ಮಿಬ್ಬರ ಫೋಟೋಗಳನ್ನು ರೀಟ್ವೀಟ್ ಮಾಡಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಶಿಂಜೋ ಅವರ ಟ್ವೀಟ್ಗಳು ಭಾರತ-ಜಪಾನ್ ನಡುವಿನ ಸ್ನೇಹದ ದೃಢತೆಗೆ ಸಾಕ್ಷಿಯಾಗಿವೆ. ಈ ಫೋಟೋಗಳಿಂದ ನಮ್ಮ ಹಳೆಯ ಮಾತುಕತೆಗಳು ನೆನಪಾದವು ಎಂದಿದ್ದಾರೆ. (ಏಜೆನ್ಸೀಸ್)