ನ್ಯೂಸ್

ಇಂಡಿಗೋ ಜತೆ ಜಪಾನ್ ಏರ್‌ಲೈನ್ಸ್ ಒಪ್ಪಂದ: ಭಾರತದ ಅನೇಕ ಸ್ಥಳಗಳಿಗೆ ಸಂಚಾರ ವಿಸ್ತರಣೆ

ಮುಂಬೈ: ಜಪಾನ್ ಏರ್‌ಲೈನ್ಸ್ ಸೋಮವಾರ ಇಂಡಿಗೋ ಜತೆ ಕೋಡ್‌ಶೇರ್ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಜಪಾನಿನ ವಿಮಾನಯಾನ ಸಂಸ್ಥೆಯು ದೇಶೀಯ ವಾಹಕದ ನೆಟ್‌ವರ್ಕ್‌ನ 14 ಸ್ಥಳಗಳಿಗೆ ಸೇವೆಗಳನ್ನು ವಿಸ್ತರಿಸಲು ನೆರವಾಗಲಿದೆ.

ಪ್ರಸ್ತುತ, ಜಪಾನ್ ಏರ್​​ಲೈನ್ಸ್ ಟೋಕಿಯೊದಿಂದ ದೆಹಲಿ ಮತ್ತು ಬೆಂಗಳೂರಿಗೆ ತನ್ನ ಸೇವೆಗಳನ್ನು ನಿರ್ವಹಿಸುತ್ತದೆ. ಇದು ಹನೇಡಾ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ರಾಜಧಾನಿಗೆ ದೈನಂದಿನ ವಿಮಾನ ಸೇವೆಗಳನ್ನು ಒದಗಿಸುತ್ತದೆ. ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ನರಿತಾ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತದೆ.

"ಜಪಾನ್ ಏರ್‌ಲೈನ್ಸ್ (ಜೆಎಎಲ್) ಮತ್ತು ಇಂಡಿಗೋ ಕೋಡ್‌ಶೇರ್ ಪಾಲುದಾರಿಕೆಗೆ ಒಪ್ಪಿಕೊಂಡಿವೆ. ಇದು ಜಪಾನ್ ಮತ್ತು ಭಾರತದ ನಡುವೆ ಹೆಚ್ಚಿನ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಪ್ರಯೋಜನ ನೀಡುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೋಡ್‌ಶೇರ್ ಪಾಲುದಾರಿಕೆಯು ಜಪಾನ್ ಏರ್‌ಲೈನ್ಸ್ ಭಾರತದಲ್ಲಿ ತನ್ನ ಸಂಪರ್ಕ ಬಲಪಡಿಸಲು ಅನುವು ಮಾಡಿಕೊಡುತ್ತದೆ. ನಂತರದ ಹಂತಗಳಲ್ಲಿ ವ್ಯಾಪಕವಾದ ದೇಶೀಯ ಮತ್ತು ಅಂತಾರಾಷ್ಟ್ರೀಯ ನೆಟ್‌ವರ್ಕ್‌ನಲ್ಲಿ ಇಂಡಿಗೋ ಗ್ರಾಹಕರಿಗೆ ಹೆಚ್ಚಿನ ಪ್ರಯಾಣ ಆಯ್ಕೆಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಈ ಪಾಲುದಾರಿಕೆಯ ಮೂಲಕ, ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಅಹಮದಾಬಾದ್, ಅಮೃತಸರ, ಕೊಚ್ಚಿ, ಕೊಯಮತ್ತೂರು, ತಿರುವನಂತಪುರಂ, ತಿರುಚಿರಾಪಳ್ಳಿ, ಪುಣೆ, ಲಖನೌ, ವಾರಾಣಸಿಯಂತಹ ಪ್ರಮುಖ ನಗರಗಳನ್ನು ಒಳಗೊಂಡ ವ್ಯಾಪಕವಾದ ಪ್ಯಾನ್-ಇಂಡಿಯಾ ನೆಟ್‌ವರ್ಕ್ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಜಪಾನ್ ಏರ್‌ಲೈನ್ಸ್ ಹೇಳಿದೆ.

"ಪಾಲುದಾರಿಕೆಯ ಈ ಹಂತವು ಜಪಾನ್ ಏರ್‌ಲೈನ್ಸ್ ಗ್ರಾಹಕರಿಗೆ ಭಾರತದಲ್ಲಿ ಇಂಡಿಗೋದ ವ್ಯಾಪಕ ನೆಟ್‌ವರ್ಕ್ ಅನ್ನು ಬಳಸಿಕೊಂಡು ಜಪಾನ್‌ಗೆ ಪ್ರಯಾಣಿಸಲು ಲಭ್ಯವಿರುವ ಆಯ್ಕೆಗಳನ್ನು ವಿಸ್ತರಿಸುತ್ತದೆ" ಎಂದು ಇಂಡಿಗೋ ನೆಟ್‌ವರ್ಕ್ ಯೋಜನೆ ಮತ್ತು ಆದಾಯ ನಿರ್ವಹಣೆ ಹಿರಿಯ ಉಪಾಧ್ಯಕ್ಷ ಅಭಿಜಿತ್ ದಾಸ್‌ಗುಪ್ತ ಹೇಳಿದ್ದಾರೆ.

ಈ ಪಾಲುದಾರಿಕೆಯು ಎರಡು ದೇಶಗಳ ನಡುವೆ ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಬೆಂಬಲಿಸಲು ತಡೆರಹಿತ ಸಂಪರ್ಕ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

"ಈ ವಿಸ್ತೃತ ನೆಟ್‌ವರ್ಕ್‌ನೊಂದಿಗೆ, ಭಾರತ ಮತ್ತು ಜಪಾನ್‌ಗೆ ಪ್ರಯಾಣಿಸುವವರು ಒಂದೇ ಟಿಕೆಟ್‌ನಲ್ಲಿ ತಮ್ಮ ವಿಮಾನವನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಭಾರತವು ಗಮನಾರ್ಹ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಜಪಾನ್ ಮತ್ತು ಭಾರತದ ನಡುವಿನ ವಿಮಾನ ಪ್ರಯಾಣದ ಬೇಡಿಕೆಯು ಹಿಂದೆಂದಿಗಿಂತಲೂ ಹೆಚ್ಚುತ್ತಿದೆ" ಎಂದು ಜಪಾನ್ ಏರ್‌ಲೈನ್ಸ್‌ನ ರೂಟ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ, ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ರಾಸ್ ಲೆಗೆಟ್ ಹೇಳಿದ್ದಾರೆ.