ನ್ಯೂಸ್

ಸರ್ವರಿಗೂ ಸದಾ ಒಳಿತು ಬಯಸುವವರು ಜಂಗಮರು: ಉಜ್ಜಯಿನಿ ಶ್ರೀ ಹೇಳಿಕೆ

ಶಿವಮೊಗ್ಗ: ವೀರಶೈವ ಜಂಗಮ ಸಮಾಜ ಕೇವಲ ಒಂದು ಜನಾಂಗ, ವ್ಯಕ್ತಿ ಅಥವಾ ವರ್ಗವಲ್ಲ. ಸಕಲ ಜೀವರಾಶಿಗಳಿಗೂ ಪ್ರಾರ್ಥನೆ, ಅರ್ಚನೆ ಮೂಲಕ ಸದಾ ಒಳಿತನ್ನೇ ಬಯಸುವುದಾಗಿದೆ ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ನಗರದ ಹೊರವಲಯದ ಚನ್ನಮುಂಬಾಪುರ(ಜನ್ನಾಪುರ)ದಲ್ಲಿ ಭಾನುವಾರ ಜಿಲ್ಲಾ ಜಂಗಮ ಸಮಾಜದಿಂದ ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಾಂಸ್ಕೃತಿಕ ಭವನದ ಶಿಲಾನ್ಯಾಸ ಮತ್ತು ಭೂಮಿಪೂಜೆ ನೆರವೇರಿಸಿ ಆಶೀವರ್ಚನ ನೀಡಿದ ಶ್ರೀಗಳು, ಜಂಗಮರು ಸಂಸ್ಕಾರ, ಆಚಾರ,ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಜೀವನದ ಎಲ್ಲ ಹಂತಗಳಲ್ಲಿ ಆಶೀರ್ವಾದ ನೀಡುವ ಶಕ್ತಿಯನ್ನು ಜಂಗಮ ಸಮಾಜ ಹೊಂದಿದೆ. ಗುರುಗಳು ಸಮಾನವಾದ ಗೌರವವನ್ನು ಲಿಂಗಕ್ಕೆ ನೀಡಬೇಕಿದ್ದರೆ ಇಲ್ಲಿ ಜಂಗಮ ಸಮಾಜದವರಿಗೂ ಗೌರವ ಕೊಡಬೇಕಿದೆ ಎಂದರು.

ಜಂಗಮರು ಸದಾ ಒಳ್ಳೆಯದನ್ನೇ ಬಯಸುತ್ತಾ, ಒಳ್ಳೆಯ ಕಾರ್ಯಗಳನ್ನೇ ಮಾಡುತ್ತಾ, ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುತ್ತಿದ್ದಾರೆ. ಒಂದು ಜೋಳಿಗೆಯನ್ನು ನಂಬುವ ಯಾವುದಾದರೂ ಸಮಾಜವಿದ್ದರೆ ಅದು ಜಂಗಮ ಸಮಾಜವಾಗಿದೆ. ಜಂಗಮರಲ್ಲೂ ಅನೇಕರು ಒಂದು ರೂಪಾಯಿ ಹಂಚಿಕೆ ಮಾಡದೇ ಶಾಸಕರಾಗಿ, ಮಂತ್ರಿಗಳಾಗಿ, ಸಂಸದರಾಗಿಯೂ ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಿಎಂಕೆ ಶಾಸ್ತ್ರಿ ಶಾಸಕರಾಗಿದ್ದರು. ಕೊಪ್ಪಳದಲ್ಲಿ ಅಳವಂಡಿ ಶಿವಮೂರ್ತಿಸ್ವಾಮಿಗಳು ಎರಡು ಬಾರಿ ಸಂಸದರಾಗಿದ್ದರು. ಅವರು ವ್ಯಕ್ತಿ ಮತ್ತು ವ್ಯಕ್ತಿತ್ವದ ಮೂಲಕವೇ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿಳಕಿ ಮಠದ ರಾಚೋಟೇಶ್ವರ ಸ್ವಾಮೀಜಿ, ಜಡೆಯ ಡಾ. ಶ್ರೀ ಮಹಾಂತ ಸ್ವಾಮೀಜಿ, ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಜಿಲ್ಲಾ ವೀರಶೈವ ಮಠಾಧೀಶರ ಪರಿಷತ್‌ನ ಹಲವು ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಕಾರ್ಯಾಧ್ಯಕ್ಷ ಎ.ಎಂ.ಚಂದ್ರಯ್ಯ ಪ್ರಾಸ್ತಾವಿಕ ಮಾತನಾಡಿದರು. ಸಮಾಜದ ಗೌರವಾಧ್ಯಕ್ಷ ಟಿ.ವಿ.ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖಂಡರಾದ ಎನ್.ಜೆ.ರಾಜಶೇಖರ್, ಎಚ್.ಮಲ್ಲಿಕಾರ್ಜುನಸ್ವಾಮಿ, ಪಾರ್ವತಮ್ಮ ಸಿಎಂ ಪಂಚಾಕ್ಷರಯ್ಯ, ಸತೀಶ್‌ಕುಮಾರ್ ಹಿರೇಮಠ್, ಮಹಾಲಿಂಗ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಎಚ್.ಎಲ್.ಲಿಂಗರಾಜ್, ಖಜಾಂಚಿ ಟಿ.ಬಿ.ಸೋಮಶೇಖರಯ್ಯ, ನಿರ್ದೇಶಕ ಎಚ್.ಎಂ.ಲೋಕೇಶ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮೃತ್ಯುಂಜಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.