ಸಾಗರ: ಜನೌಷಧ ಕೇಂದ್ರದಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಗಳು ಸಿಗುವಂತೆ ಮಾಡಿರುವ ಕೇಂದ್ರ ಸರ್ಕಾರದ ಅತ್ಯುತ್ತಮ ಯೋಜನೆ ಇದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಸಾಗರದ ಆರ್.ಪಿ.ರಸ್ತೆಯಲ್ಲಿ ಭಾನುವಾರ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನೌಷಧ ಯೋಜನೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಕನಸಿನ ಯೋಜನೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಒಪ್ಪಿಗೆ ಸೂಚಿಸಿದ್ದರಿಂದ ದೇಶಾದ್ಯಂತ ಕೇಂದ್ರಗಳು ಯಶಸ್ವಿಯಾಗಿ ನಡೆಯುತ್ತಿವೆ. ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಖಾಸಗಿ ವೈದ್ಯರು ಜನೌಷಧ ಕೇಂದ್ರದಲ್ಲೇ ಸಿಗುವ ಔಷಧಗಳ ಚೀಟಿ ಬರೆದು ಕೊಡಬೇಕು. ಗುಣಮಟ್ಟದ ಔಷಧ ಜತೆಗೆ ಸರ್ಕಾರದ ಮೇಲುಸ್ತುವಾರಿಯಲ್ಲಿ ಔಷಧ ಸರಬರಾಜು ಮಾಡಲಾಗುತ್ತದೆ. ಜನರು ಹೆಚ್ಚು ಹಣ ಕೊಟ್ಟು ಔಷಧಿ ಖರೀದಿಸುವ ಬದಲು ಇದೇ ಕೇಂದ್ರದಲ್ಲಿ ಖರೀದಿಸಬೇಕು. ಸಾರ್ವಜನಿಕರಿಗೆ ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನಮ್ಮ ಕಾರ್ಯಕರ್ತರು ನೀಡಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಟಿ.ಡಿ.ಮೇಘರಾಜ್, ಗಣೇಶಪ್ರಸಾದ್, ಆರ್.ಶ್ರೀನಿವಾಸ್, ಪ್ರಮುಖರಾದ ಮಹಾಂತಸ್ವಾಮಿ, ಪ್ರವೀಣಕುಮಾರ್, ರುದ್ರಸ್ವಾಮಿ, ಚನ್ನಯ್ಯ, ರುದ್ರಯ್ಯ, ಮಂಗಳಮ್ಮ ಇತರರಿದ್ದರು.