ಹುಬ್ಬಳ್ಳಿ/ತುಮಕೂರು/ಉಡುಪಿ/ಯಾದಗಿರಿ: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲೇ ಬೇಕು ಎಂದು ಪಣತೊಟ್ಟಿರುವ ಪಕ್ಷದ ನಾಯಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಸ್ವರಾಜ್ ಸಮಾವೇಶ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ. ಹುಬ್ಬಳ್ಳಿ, ಗದಗ, ತುಮಕೂರು, ರಾಮನಗರ, ಯಾದಗಿರಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶನಿವಾರ ನಡೆದ ಜನಸ್ವರಾಜ್ ಸಮಾವೇಶಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ.
ಬಿಜೆಪಿ ಗೆದ್ದಂತೆಯೇ!: ಪರಿಷತ್ನಲ್ಲಿ ಬಿಜೆಪಿ ಅಭ್ಯರ್ಥಿಗಳು 20 ಕ್ಷೇತ್ರಗಳಲ್ಲಿ ಗೆದ್ದಂತೆಯೇ. ಗೆಲುವಿನ ಅಂತರಕ್ಕಾಗಿ ಚುನಾವಣೆವರೆಗೆ ಕಾಯಬೇಕಿದೆಯಷ್ಟೇ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆ ನಂತರ ಮತ್ತೆ ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 140 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನನ್ನ ಗುರಿ ಎಂದರು. ಹಣ, ಹೆಂಡ, ತೋಳ್ಬಲ, ಅಧಿಕಾರದ ಬಲ ಹಾಗೂ ಜಾತಿಯ ವಿಷ ಬೇಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್ ಈಗ ಮುಳುಗುವ ಹಡಗಿನಂತಾಗಿದೆ. ಮುಂದಿನ ಕನಿಷ್ಠ 20 ವರ್ಷಗಳವರೆಗೆ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.
30 ಲಕ್ಷ ರೈತರಿಗೆ ಕೃಷಿ ಸಾಲ ಗುರಿ: ರಾಜ್ಯದಲ್ಲಿ 30 ಲಕ್ಷ ರೈತರಿಗೆ 20,810 ಕೋಟಿ ರೂ. ಕೃಷಿ ಸಾಲ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಈಗಾಗಲೆ 14 ಲಕ್ಷ ರೈತರಿಗೆ 10,591 ಕೋಟಿ ರೂ. ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉಡುಪಿಯ ಜನಸ್ವರಾಜ್ ಸಮಾವೇಶದಲ್ಲಿ ತಿಳಿಸಿದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ 2 ಸಾವಿರ ರೂ. ಏರಿಕೆ ಮಾಡಲು ಸರ್ಕಾರ ಕ್ರಮ ವಹಿಸಿದೆ. ಜತೆಗೆ ಸದಸ್ಯರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಸಂಚರಿಸಲು ಉಚಿತ ಪಾಸ್ ನೀಡಲಾಗುತ್ತಿದೆ ಎಂದರು. ಮಂಗಳೂರಿನಲ್ಲಿ ಜನಸ್ವರಾಜ್ ಸಮಾವೇಶವನ್ನು ಕೇಂದ್ರ ಮಾಜಿ ಸಚಿವ ಸದಾನಂದ ಗೌಡ ಉದ್ಘಾಟಿಸಿದರು.
ಗ್ರಾಪಂ ಸದೃಢಕ್ಕೆ ಬಿಜೆಪಿಗೆ ಮತ ನೀಡಿ: ರಾಜ್ಯದಲ್ಲಿ ವಿವಿಧ ಯೋಜನೆಗಳು ಮತ್ತು ನೀತಿ- ನಿರೂಪಣೆ ಜಾರಿಗೆ ಬರಬೇಕಾದರೆ ಪರಿಷತ್ನಲ್ಲಿ ನಮಗೆ ಬಹುಮತ ಬೇಕು. ವಿಧಾನಸಭೆಯಲ್ಲಿ ಸ್ಥಾನಗಳ ಅಗತ್ಯ ಎಷ್ಟಿದೆಯೋ ಅಷ್ಟೇ ಅಗತ್ಯ ವಿಧಾನ ಪರಿಷತ್ನಲ್ಲೂ ಬಿಜೆಪಿಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಯಾದಗಿರಿಯಲ್ಲಿ ಹೇಳಿದರು. ಪ್ರತಿ ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರು, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್, ಪಂಚಾಯಿತಿ ಸದಸ್ಯರಿಗೆ ಗೌರವಧನ ನೀಡುವಂಥ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ಪಂಚಾಯಿತಿಗಳು ಸದೃಢವಾಗಬೇಕಾದರೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತೇವೆ: ಪರಿಷತ್ನಲ್ಲಿ ಬಹುಮತಕ್ಕೆ ಹತ್ತಿರ ಬರಲು ಈ ಚುನಾವಣೆ ಬಹಳ ಮುಖ್ಯವಾಗಿದ್ದು 15ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ತುಮಕೂರಿನಲ್ಲಿ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿ, ಗ್ರಾಪಂನಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. 45 ಸಾವಿರಕ್ಕೂ ಹೆಚ್ಚು ಸದಸ್ಯರು ಬಿಜೆಪಿ ಬೆಂಬಲಿತರಿದ್ದು, ಯಾತ್ರೆಗೆ ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಬಿಜೆಪಿ ಬೆಂಬಲಿತ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಸಭೆಯಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಇದಕ್ಕೆ ನಿದರ್ಶನ ಎಂದರು. ಪಂಜಾಬ್ನಲ್ಲಿ ಒಬ್ಬ ಸಿದ್ದು , ರಾಜ್ಯದಲ್ಲೊಬ್ಬ ಸಿದ್ದು ಸೇರಿಕೊಂಡು ಕಾಂಗ್ರೆಸ್ ಸರ್ವನಾಶ ಮಾಡುತ್ತಿದ್ದಾರೆ ಎಂದು ಶೆಟ್ಟರ್ ಕಿಡಿಕಾರಿದರು.
ಸಿಎಂ ಗಾದಿಗೆ ಪೈಪೋಟಿ ತಪ್ಪಿಸಲು ಕೊರಟಗೆರೆಯಲ್ಲಿ ಜಿ.ಪರಮೇಶ್ವರರನ್ನು ಸೋಲಿಸುವ ಕಾಂಗ್ರೆಸ್ ಮುಖಂಡರು ದಲಿತರ ಬಗ್ಗೆ ಮಾತನಾಡುವುದನ್ನು ಜನ ನಂಬುವುದಿಲ್ಲ.
| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ