ನ್ಯೂಸ್

OMC ಅಕ್ರಮ ಗಣಿಗಾರಿಕೆಯಲ್ಲಿ ಜನಾರ್ದನ ರೆಡ್ಡಿ ಅಪರಾಧಿ; 7 ವರ್ಷ ಜೈಲು ಶಿಕ್ಷೆ: ಕೋರ್ಟ್​ ತೀರ್ಪು

OMC: ಸುಮಾರು 15 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ತೀವ್ರ ಸಂಚಲನ ಮೂಡಿಸಿದ್ದ ಓಬಳಾಪುರಂ ಅಕ್ರಮ ಗಣಿಗಾರಿಕೆ(OMC) ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗಿದ್ದು, ಪ್ರಕರಣದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅಪರಾಧಿ ಎಂದು  ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ.

OMC ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್​ ಸಿಬಿಐ ನ್ಯಾಯಾಲಯವು ಐದು ಜನರನ್ನು ದೋಷಿಗಳು ಎಂದು ತೀರ್ಪು ನೀಡಿದೆ. ಇಬ್ಬರನ್ನೂ ಖುಲಾಸೆಗೊಳಿಸಿದೆ. ತೀರ್ಪಿನಲ್ಲಿ ಗಾಲಿ ಜನಾರ್ದನ ರೆಡ್ಡಿ (ಎ2), ಅವರ ಪಿಎ ಅಲಿ ಖಾನ್ (ಎ7), ವಿ.ಡಿ. ರಾಜಗೋಪಾಲ್ (ಎ3), ಶ್ರೀನಿವಾಸ್ ರೆಡ್ಡಿ (ಎ1) ಮತ್ತು ಓಬಳಾಪುರಂ ಮೈನಿಂಗ್ ಕಂಪನಿಯನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಮತ್ತು ಮಾಜಿ ಐಎಎಸ್ ಅಧಿಕಾರಿ ಕೃಪಾನಂದಂ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಸಬಿತಾ 2004 ರಿಂದ 2009 ರವರೆಗೆ ಗಣಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು.

ಅನಂತಪುರ ಜಿಲ್ಲೆಯ ಕರ್ನಾಟಕದ ಗಡಿಯಲ್ಲಿರುವ(ಬಳ್ಳಾರಿ) ಓಬಳಾಪುರಂನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದೆ. ಈ ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳಿದ್ದಾರೆ. ಆರೋಪಿಯಾಗಿರುವ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಹೈಕೋರ್ಟ್ ಈಗಾಗಲೇ ಖುಲಾಸೆಗೊಳಿಸಿದೆ. ಈ ಆರೋಪಿಗಳಲ್ಲಿ ಒಬ್ಬ (ಲಿಂಗರೆಡ್ಡಿ) ಸಾವನ್ನಪ್ಪಿದ್ದಾನೆ. ಉಳಿದ ಏಳು ಜನರಲ್ಲಿ ಇಬ್ಬರಿಗೆ ಸಿಬಿಐ ನ್ಯಾಯಾಲಯ ಇದೀಗ ಕ್ಲೀನ್ ಚಿಟ್ ನೀಡಿದ್ದು, ಉಳಿದ ಐದು ಜನರನ್ನು ದೋಷಿಗಳು ಎಂದು ತೀರ್ಪು ನೀಡಿತು. ನ್ಯಾಯಾಲಯವು ಎಲ್ಲಾ 5 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.