ಗದಗ: ನಮ್ಮ ರಾಜಕೀಯ ಜೀವನ ಆರಂಭವಾಗಿದ್ದು ಬಿಜೆಪಿ ಪಕ್ಷದ ಮೂಲಕ. ಲಾಲ್ ಕೃಷ್ಣ ಅಡ್ವಾಣಿ ಅವರ ರಥಯಾತ್ರೆಯಿಂದ ಸ್ಪೂರ್ತಿಗೊಂಡು ಬಿಜೆಪಿ ಬಂದೆವು. 30 ವರ್ಷದಿಂದ ಬಿಜೆಪಿ ಪಕ್ಷದಲ್ಲಿದ್ದೇವೆ. ನಮ್ಮ ದೇಹವನ್ನು ಎಲ್ಲೇ ಟಚ್ ಮಾಡಿದ್ರು ಕೂಡಾ ಬಿಜೆಪಿ ಬಗೆಗೆ ಅಭಿಮಾನ ಇದ್ದೇ ಇರುತ್ತದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಸುಪ್ರೀಂ ಕೋರ್ಟ್ ಬಳ್ಳಾರಿಗೆ ನಿರ್ಬಂಧ ಹೇರಿದೆ. ಪದೇ ಪದೇ ಬೆಂಗಳೂರಿಗೆ ಬರಲು ಇಷ್ಟವಿಲ್ಲ. ಉತ್ತರ ಕರ್ನಾಟಕದಲ್ಲಿಯೇ ಇದ್ದು, ನಮ್ಮ ಜನರ ನಡುವೆ ಇರಬೇಕು ಎಂಬುದು ನನ್ನ ಆಸೆ. ಹೀಗಾಗಿ ಗಂಗಾವತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಬಸವಣ್ಣನ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ. ಹೊಸ ಪಕ್ಷ ಕಟ್ಟುವ ವಿಚಾರ ಇಲ್ಲಾ. ನನ್ನ ಜತೆಗೆ ಎಷ್ಟು ಮುಖಂಡರಿದ್ದಾರೆ ಎನ್ನುವುದಕ್ಕಿಂತ, ನನ್ನ ಜೊತೆಗೆ ಜನರು ಇದ್ದಾರೆ. ಸಾರ್ವಜನಿಕರ ಮಧ್ಯೆ ಓಡಾಟ ಮಾಡುತ್ತಿದ್ದೇನೆ ಎಂದು ಹೇಳಿದರು.
ಸಂಪೂರ್ಣವಾಗಿ ಸಾರ್ವಜನಿಕ ಬದುಕಿನಲ್ಲಿ ಬರಬೇಕು ಎನ್ನುವ ತಿರ್ಮಾನ ತೆಗೆದೊಂಡಿದ್ದೇನೆ. ಮೊದಲೇ ಹೇಳಿದಂತೆ ಬಿಜೆಪಿ ಪಕ್ಷದಿಂದಲೇ ಸ್ಫರ್ಧೆ ಮಾಡುತ್ತೇನೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದರಂತೆ ಮುಂದುವರಿಯುತ್ತೇನೆ ಎಂದು ಹೇಳಿದರು.
ಶ್ರೀರಾಮುಲು-ರೆಡ್ಡಿ ನಡುವೆ ಮುನಿಸು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ರಾಮುಲು ಮನೆ ಅಂದ್ರೆ ನನ್ನ ಮನೆ. ನನ್ನ ಮನೆ ರಾಮುಲು ಮನೆ ಇದ್ದಂತೆ. ಇಡೀ ಜಗತ್ತು ಏನೇ ಹೇಳಿದರು ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ. ನನ್ನ ಮತ್ತು ರಾಮುಲು ನಡುವೆ ರಾಜಕೀಯಕ್ಕೂ ಮೀರಿ ಸಂಬಂಧವಿದೆ. ಹೀಗಿದ್ದಾಗ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.