ಬೆಂಗಳೂರು: ರಾಜ್ಯ ಬಿಜೆಪಿ ವಿರುದ್ಧ ಅಸಮಾಧಾನಗೊಂಡು ಇತ್ತೀಚಿಗಷ್ಟೇ 'ಕಲ್ಯಾಣರಾಜ್ಯ ಪ್ರಗತಿ ಪಕ್ಷ' ಸ್ಥಾಪಿಸಿರುವ ಗಾಲಿ ಜನಾರ್ದನ ರೆಡ್ಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಿಕೊಳ್ಳುವ ಪಣ ತೊಟ್ಟಿದ್ದಾರೆ. ಇದರ ಬೆನ್ನಲ್ಲೇ ಜನಾರ್ದನ ರೆಡ್ಡಿಯ ಆಸ್ತಿ ಜಪ್ತಿ ಪ್ರಕ್ರಿಯೆಗೆ ಅಸ್ತು ಎನ್ನುವ ಮೂಲಕ ಕೇಂದ್ರ ಸರ್ಕಾರ ಶಾಕ್ ನೀಡಿದೆ.
ಅಕ್ರಮ ಗಣಿಗಾರಿಕೆಯಿಂದ ಬಂದ ಹಣದಲ್ಲಿ ಆಸ್ತಿ ಸಂಪಾದನೆ ಸಂಬಂಧ ಆಸ್ತಿಗಳ ಗುರುತಿಸಿ ಜಪ್ತಿ ಮಾಡಲು ಈ ಹಿಂದೆಯೇ ರಾಜ್ಯ ಸರ್ಕಾರದ ಅನುಮತಿಗಾಗಿ ಸಿಬಿಐ ಮನವಿ ಮಾಡಿತ್ತು. ಆದರೆ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ. ಹಾಗಾಗಿ ಸಿಬಿಐ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸುತ್ತಿದ್ದಂತೆ, ಜನಾರ್ದನ ರೆಡ್ಡಿಗೆ ಸೇರಿದ ಆಸ್ತಿಗಳ ಜಪ್ತಿಗೆ ಸರ್ಕಾರ ಅಸ್ತು ಎಂದಿದೆ.
ರಾಜ್ಯ ಸರ್ಕಾರದ ನಿರ್ಧಾರವನ್ನು ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದು, ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ.