ನ್ಯೂಸ್

ಮೋದಿ ಅಲೆಗೆ ಜನಾರ್ದನರೆಡ್ಡಿ ಬಲ; ಬಿ.ಶ್ರೀರಾಮುಲು ಖುಷಿ

ಬೆಂಗಳೂರು: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಅಲೆ ಬೀಸುತ್ತಿದೆ. ರಾಜ್ಯದಲ್ಲೂ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಜಿ.ಜನಾರ್ದನರೆಡ್ಡಿಯವರು ಸ್ವಂತ ಮನೆಗೆ ಮರಳುತ್ತಿರುವ ಕಾರಣ ಮತ್ತಷ್ಟು ಬಲ ತುಂಬಲಿದೆ ಎಂದು ಮಾಜಿ ಸಚಿವ, ಬಳ್ಳಾರಿ ಎಸ್ ಟಿ ಮೀಸಲು ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ.ಶ್ರೀರಾಮುಲು ಫುಲ್ ಖುಷಿಯಾಗಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದಲೇ ರಾಜಕೀಯ‌ ಕ್ಷೇತ್ರ ಪ್ರವೇಶಿಸಿದ ಜನಾರ್ದನರೆಡ್ಡಿ ನಾಯಕರಾಗಿ‌ ಬೆಳೆದವರು. ಕಾರಣಾಂತರಗಳಿಂದ ಪಕ್ಷದಿಂದ ದೂರ ಸರಿದು ತಮ್ಮದೇ ಆದ ಪಕ್ಷ ಕಲ್ಯಾಣರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದಾಗ ಬೇಸರವಾದದ್ದು ನಿಜ.

ಆದರೆ ಪಕ್ಷದ ರಾಷ್ಟ್ರೀಯ ನಾಯಕರು ಕರೆದು ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ರೆಡ್ಡಿಯವರನ್ನು ಪಕ್ಷಕ್ಕೆ‌ ವಾಪಸ್ ಕರೆತರಲು ರಾಜ್ಯ ನಾಯಕರು  ಒತ್ತಾಸೆ ನೀಡಿದ್ದರು. ಕೆಆರ್ ಪಿಪಿ ವಿಲೀನದೊಂದಿಗೆ ಪಕ್ಷಕ್ಕೆ‌ ಸೇರ್ಪಡೆಯಾಗುತ್ತಿರುವ ಕಾರಣ ಎಲ್ಲವೂ ತಿಳಿಯಾಗಿದೆ. ಒಂದಾಗಿ ಕೆಲಸ ಮಾಡುವುದಕ್ಕೆ ಕಾರ್ಯಕರ್ತರಿಗೆ‌ ಉತ್ತೇಜನ ನೀಡಿದಂತಾಗಿದೆ ಎಂದು ಬಿ.ಶ್ರೀರಾಮುಲು ಹೇಳಿದರು.

ಅನುಕೂಲ ಸಹಜ

ಜನಾರ್ದನರೆಡ್ಡಿ ಸ್ವಂತ ಪಕ್ಷಕ್ಕೆ ವಾಪಸ್ಸಾಗಿರುವ ಕಾರಣ ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಸಹಜವಾಗಿಯೇ ಅನುಕೂಲವಾಗಲಿದೆ. ಮೋದಿಯವರ ಅಲೆಯನ್ನು ಮತಗಳಾಗಿ ಪರಿವರ್ತಿಸುವುದಕ್ಕೆ ರೆಡ್ಡಿ ಶಕ್ತಿ ಬಳಕೆಯಾಗಲಿದೆ. ಮೋದಿಯವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಜನಾರ್ದನರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ, ತಮ್ಮ ಸೋಲಿಗೆ ಕಾರಣಗಳು ಅನೇಕ. ಇದರಲ್ಲಿ ಜನಾರ್ದನ ರೆಡ್ಡಿ ಪಕ್ಷದಿಂದ ದೂರ ಸರಿದದ್ದೂ ಒಂದು. ವಸ್ತುಸ್ಥಿತಿ ಅವರು, ನಾವು ಅರ್ಥ ಮಾಡಿಕೊಂಡಿದ್ದೇವೆ. ಗೊಂದಲ ಬಗೆಹರಿದಿದ್ದು, ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದಷ್ಟೇ ನಮ್ಮ ಮುಂದಿರುವ ಗುರಿ ಎಂದು ಬಿ.ಶ್ರೀರಾಮುಲು ಹೇಳಿದರು.