ಜನ ನಾಯಗನ್ ಚಿತ್ರದ ಪೋಸ್ಟರ್ 
ನ್ಯೂಸ್

JANANAYAGAN MOVIE REVIEW: ವಿಜಯ್ ರಾಜಕೀಯ ದಾಳವೇ ‘ಜನನಾಯಗನ್’

ಪ್ರಮುಖ ಮುಖ್ಯಾಂಶಗಳು

  • ತಮಿಳು ನಟ ವಿಜಯ್ ಅಭಿನಯದ ಕೊನೆಯ ಸಿನಿಮಾಕ್ಕೆ ಮಿಶ್ರಪ್ರತಿಕ್ರಿಯೆ
  • ನಟನ ರಾಜಕೀಯ ಗುರುತು, ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲಿದ ಚಿತ್ರ
  • ದಳಪತಿ ವಿಜಯ್ ಮಾತ್ರ ಡಾನ್ಸ್, ಡೈಲಾಗ್, ಫೈಟ್ ಮೂಲಕ ಅಭಿಮಾನಿಗಳಿಗೆ ಭರ್ಜರಿ ಔತಣ
ಚಿತ್ರ: ಜನನಾಯಗನ್
ನಿರ್ದೇಶನ: ಎಚ್.ವಿನೋದ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
ತಾರಾಗಣ: ದಳಪತಿ ವಿಜಯ್, ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್, ಬಾಬಿ ಡಿಯೋಲ್, ಪ್ರಿಯಾಮಣಿ, ಗೌತಮ್ ಮೆನನ್ ಮತ್ತಿತರರು
ಶಿವ ಸ್ಥಾವರಮಠ
ರಾಜಕೀಯ ಪ್ರವೇಶ ಖಚಿತಪಡಿಸಿದ ಬೆನ್ನಲ್ಲೇ ನಟ ವಿಜಯ್ ‘ಜನನಾಯಗನ್’ ವೃತ್ತಿ ಜೀವನದ ಕೊನೆಯ ಸಿನಿಮಾ ಎಂದು ಘೋಷಿಸಿದ್ದರು. ಇದೀಗ ಹಲವು ಸವಾಲುಗಳನ್ನು ಎದುರಿಸಿ ಸಿನಿಮಾ ತೆರೆ ಮೇಲೆ ಬಂದಿದೆ. ಇಡೀ ಚಿತ್ರ ವಿಜಯ್ ಹೀರೋಯಿಸಂ ತೋರಿಸುವ ಜತೆಗೆ ನಟನ ರಾಜಕೀಯ ಗುರುತು, ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲಿದೆ. ಒಟ್ಟಾರೆ ಪ್ರಚಾರಕ್ಕೆಂದೇ ಈ ಸಿನಿಮಾ ಮಾಡಿದಂತಿದ್ದು, ಅದರ ಒಳಸುಳಿಗೆ ಸಿಕ್ಕು ಕಥೆಯು ದಡಸೇರದಂತಾಗಿದೆ.
ಜೈಲಿನಲ್ಲಿ ನಡೆಯುವ ಸಾಹಸ ದೃಶ್ಯದ ಮೂಲಕ ಸಿನಿಮಾ ಆರಂಭವಾಗುತ್ತದೆ. ಬಂಧನವಾಗಿರುವ 20 ಕೈದಿಗಳು ಇಡೀ ಜೈಲನ್ನು ಸ್ಮಶಾನ ಮಾಡಲು ಮುಂದಾಗುತ್ತಾರೆ. ಜೈಲು ಅಧಿಕಾರಿಗಳು ಏನೂ ಮಾಡದ ಸ್ಥಿತಿ ಉಂಟಾದಾಗ ಕೊನೆಗೆ ವಿಲನ್ ಪಡೆಯನ್ನು ಬಂಧಿತ ಪೊಲೀಸ್ ಅಧಿಕಾರಿ ದಳಪತಿ ವೇಟ್ರಿ ಕೊಂಡಾನ್ (ವಿಜಯ್) ಹಿಮ್ಮೆಟ್ಟಿಸುತ್ತಾನೆ. ಪೊಲೀಸ್ ಅಧಿಕಾರಿ ಶ್ರೀಕಾಂತ್ (ಗೌತಮ್ ಮೆನನ್) ವಿಶ್ವಾಸ ಗಳಿಸಿ, ಅವರ ಮನೆ ಸೇರುತ್ತಾನೆ. ಪೊಲೀಸ್ ಅಧಿಕಾರಿಯ ಪುತ್ರಿ ವಿಜಿಗೆ, ದಳಪತಿ ಎಂದರೆ ಅಚ್ಚುಮೆಚ್ಚು. ಹೀಗಿರುವಾಗ ಶ್ರೀಕಾಂತ್ ಅಕಾಲಿಕ ಮರಣವನ್ನಪ್ಪುವ ಕಾರಣ, ವಿಜಿ ಜವಾಬ್ದಾರಿ ದಳಪತಿ ಹೊರುತ್ತಾನೆ. ತಂದೆ-ತಾಯಿ ಆಸೆಯಂತೆ ಆಕೆಯನ್ನು ಸೇನೆಗೆ ಸೇರಿಸಲು ತಯಾರಿ ನೀಡುತ್ತಾನೆ. ಹೀಗಿರುವಾಗ, ಒಮ್ಮೆ ಖಲೀಲ್ ಎಂಬ ಗುಪ್ತಚರ ಅಧಿಕಾರಿ ರಹಸ್ಯ ಫೈಲೊಂದನ್ನು ವಿಜಿ (ಮಮಿತಾ) ಮೂಲಕ ಮುಖ್ಯಮಂತ್ರಿಗೆ ಕೊಡಿಸುತ್ತಾನೆ. ಆಗ ಭೂಗತ ಪಾತಕಿ ಜಾನ್ ಹೆಮ್ಲರ್ (ಬಾಬಿ ಡಿಯೋಲ್) ಕಣ್ಣು ವಿಜಿ ಮೇಲೆ ಬಿದ್ದು, ಅವಳನ್ನು ಮುಗಿಸಲು ಪಡೆ ಕಳುಹಿಸುತ್ತಾನೆ. ವಿಜಿಯನ್ನು ದಳಪತಿ ರಕ್ಷಿಸುತ್ತಾನೆ. ಆಗಲೇ ಗೊತ್ತಾಗುವುದು ಜಾನ್ ಹೆಮ್ಲರ್ ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದವ ಹಾಗೂ ದಳಪತಿ ಶತ್ರು ಎಂದು. ಮುಂದೆ ನಡೆಯುವ ಇಬ್ಬರ ಕದನದಲ್ಲಿ ‘ಜನನಾಯಗನ್’ ಸಿದ್ಧಾಂತಗಳು ತೆರೆದುಕೊಳ್ಳುತ್ತವೆ.
ಇಲ್ಲಿ ನಿರ್ದೇಶಕ ವಿನೋದ್ ಮೇಲೆ ಎರಡು ಜವಾಬ್ದಾರಿಗಳಿವೆ. ದಳಪತಿ ಅಭಿಮಾನಿಗಳಿಗೆ ಮಾಸ್ ಮನರಂಜನೆ ಕೊಡುವುದು ಹಾಗೂ ನಟನ ಕೊನೆಯ ಸಿನಿಮಾವನ್ನು ಐತಿಹಾಸಿಕವಾಗಿಸುವುದು. ಎರಡರಲ್ಲೂ ಮೊದಲನೆಯದಕ್ಕೆ ಶೇ.85ರಷ್ಟು ನ್ಯಾಯ ಒದಗಿಸಿದರೆ, ಈ ಚಿತ್ರವನ್ನು ಐತಿಹಾಸಿಕವಾಗಿಸುವಲ್ಲಿ ವಿನೋದ್ ಸೋತಿದ್ದಾರೆ. ಮೊದಲರ್ಧ ತೆಲುಗಿನ ‘ಭಗವಂತ ಕೇಸರಿ’ ಕಥೆಯಾದರೆ, ದ್ವಿತೀಯಾರ್ಧ ತಮಿಳಿನ ‘ತುಪಾಕಿ’, ‘ಥೆರಿ’, ‘ಎಂಧಿರಾನ್’... ಹೀಗೆ ಹಲವು ಸಿನಿಮಾಗಳು ಇಣುಕು ಹಾಕುತ್ತವೆ. ಇಲ್ಲಿ ‘ಭಗವಂತ ಕೇಸರಿ’ಗೂ ನ್ಯಾಯ ಸಿಕ್ಕಿಲ್ಲ, ಅತ್ತ ಕಡೆ ವಿಜಯ್ ರಾಜಕೀಯ ಐಡೆಂಟಿಟಿಗೂ ಸ್ಪಷ್ಟತೆ ದೊರೆತಿಲ್ಲ. ಕೆಲ ಒತ್ತಡ, ಧಾವಂತಗಳ ನಡುವೆ ಬರವಣಿಗೆ ಸೊರಗಿದೆ. ವಿಜಯ್ ‘ಜನನಾಯಗನ್’ ಮಾಡುವ ದೃಷ್ಟಿಯಲ್ಲಿ ಧರ್ಮಗಳ ನಡುವಿನ ಸಾಮರಸ್ಯ, ಹಳ್ಳಿ ಜನರಿಗೆ ದಳಪತಿ ಹೀರೋ ಆಗುವುದು, ಸೀ ಸಬಲೀಕರಣ, ಮಕ್ಕಳಿಗೆ ಗುಡ್ ಟಚ್ - ಬ್ಯಾಡ್ ಟಚ್ ಪಾಠ... ಹೀಗೆ ಹಲವಾರು ಅಂಶಗಳು ಬಂದರೂ, ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ದಳಪತಿ ವಿಜಯ್ ಮಾತ್ರ ಡಾನ್ಸ್, ಡೈಲಾಗ್, ಫೈಟ್ ಮೂಲಕ ಅಭಿಮಾನಿಗಳಿಗೆ ಭರ್ಜರಿ ಔತಣ ನೀಡಿದ್ದಾರೆ. ಪೊಲೀಸ್ ಆಧಿಕಾರಿಯಾಗಿದ್ದ ಬಾಬಿ ಡಿಯೋಲ್ ಭೂಗತ ಪಾತಕಿ ಆಗುವ ಹಿಂದಿನ ಲೆಕ್ಕಾಚಾರವೇ ಅಸ್ಪಷ್ಟ. ಮಮಿತಾ ಬೈಜು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಕಾಶ್ ರಾಜ್, ಪೂಜಾ ಹೆಗ್ಡೆ, ಪ್ರಿಯಾಮಣಿ ಪಾತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. ಅನಿರುದ್ಧ ರವಿಚಂದ್ರನ್ ಸಂಗೀತ ವಿಜಯ್ ಮ್ಯಾನರಿಸಂಗೆ ಪೂರಕವಾಗಿದೆ.
ರೇಟಿಂಗ್: 3

ದಳಪತಿ ಹ್ಯಾಟ್ರಿಕ್

ಮಿಶ್ರಪ್ರತಿಕ್ರಿಯೆಯ ನಡುವೆಯೂ ‘ಜನನಾಯಗನ್’ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ರಿಲೀಸ್‌ಗೂ ಮುನ್ನವೇ ಚಿತ್ರದ 10 ಲಕ್ಷಕ್ಕೂ ಅಧಿಕ ಆನ್‌ಲೈನ್ ಟಿಕೆಟ್ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಇನ್ನು ‘ವಾರಿಸು’ (2023), ‘ದ ಗ್ರೇಟೆಸ್ಟ್ ಆಫ್​ ಆಲ್ ಟೈಮ್’ (2024) ಕೂಡ ರಿಲೀಸ್‌ಗೂ ಮುನ್ನ ದಾಖಲೆ ಪ್ರಮಾಣದಲ್ಲಿ ಟಿಕೆಟ್‌ಗಳು ಮಾರಾಟವಾಗಿದ್ದವು. ಇದೀಗ ‘ಜನನಾಯಗನ್’ ಆ ಸಾಲಿಗೆ ಸೇರಿದ್ದು, ಈ ಮೂಲಕ ವಿಜಯ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತೀಯ ಚಿತ್ರರಂಗದ ಮೊದಲಿಗ ಎಂಬ ಹಿರಿಮೆಗೆ ವಿಜಯ್ ಪಾತ್ರವಾಗುತ್ತಿದ್ದಾರೆ.