Jana Nayagan: ತಮಿಳು ನಟ, ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್' ಚಿತ್ರೀಕರಣ ಸದ್ಯ ಭರದಿಂದ ಸಾಗುತ್ತಿದೆ. ಎಚ್. ವಿನೋತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳು ಕೂಡಿರಲಿದ್ದು, ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಡೆಯ ಸಿನಿಮಾವನ್ನು ಸಂಭ್ರಮಿಸುವಂತೆ ಮಾಡಲು ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಎನ್ಕೌಂಟರ್ ಆಗ್ರಹದ ಬೆನ್ನಲ್ಲೇ ಆರೋಪಿಗೆ ಗುಂಡೇಟು! ಪತ್ನಿಗೆ ಬೆಂಕಿಯಿಟ್ಟವನಿಗೆ ನರಕ ದರ್ಶನ | Dowry Murder Case
ಪ್ರಸ್ತುತ, ತಮ್ಮದೇ ರಾಜಕೀಯ ಪಕ್ಷವನ್ನು ಕಟ್ಟಿಕೊಂಡು ಜನಸೇವೆಗೆ ನಿಂತಿರುವ 'ಜನನಾಯಗನ್', ತಮ್ಮ ಸಿನಿವೃತ್ತಿಯ ಕೊನೆಯ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ವಿಜಯ್ ಮತ್ತು ಸೌತ್ ಬ್ಯೂಟಿ ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳು ಕೂಡಿರಲಿವೆ ಎಂಬ ಸುದ್ದಿ ಸದ್ಯ ಕಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇತ್ತೀಚೆಗಷ್ಟೇ ಬಿಡುಗಡೆಗೊಂಡ ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ 'ಕೂಲಿ' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ತೆಲುಗು ನಟ ನಾಗಾರ್ಜುನ, ಬಾಲಿವುಡ್ ನಟ ಅಮಿರ್ ಖಾನ್ ಸೇರಿದಂತೆ ಹಲವರು ವಿಶೇಷ ಪಾತ್ರದಲ್ಲಿ ಮಿಂಚಿದರು. ಇದೇ ರೀತಿ 'ಜನನಾಯಗನ್' ಚಿತ್ರದಲ್ಲಿಯೂ ವಿಶೇಷ ಪಾತ್ರಗಳು ಇರಲಿದೆ. ಆದರೆ, ಸ್ಟಾರ್ ನಟರಲ್ಲ. ಬದಲಿಗೆ ಸ್ಟಾರ್ ನಿರ್ದೇಶಕರು ಎಂಬುದು ಗಮನಾರ್ಹ.
ವಿಜಯ್ ಸಿನಿವೃತ್ತಿಯಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸಿನಿ ವರದಿಯೊಂದು ಉಲ್ಲೇಖಿಸಿದೆ. ವರದಿಯ ಪ್ರಕಾರ, ನಿರ್ದೇಶಕರಾದ ಲೋಕೇಶ್ ಕನಕರಾಜ್, ನೆಲ್ಸನ್ ದಿಲೀಪ್‌ಕುಮಾರ್ ಮತ್ತು ಅಟ್ಲೀ ಈ ವಿಶೇಷ ಎಂಟ್ರಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಚಿತ್ರವು ಮುಂದಿನ ವರ್ಷ ಜನವರಿ 9ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ,(ಏಜೆನ್ಸೀಸ್).